ಮೈಸೂರು: ಬೇಸಿಗೆ ಕಾಲ ಆರಂಭಕ್ಕೂ ಮೊದಲೇ ಜಿಲ್ಲೆಯಲ್ಲಿನ ಹಲವು ನಾಲೆಗಳು ಬರಿದಾಗಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿನ ಅಭಾವ ತಪ್ಪಿಸಲು ಯಾವ ಹಾದಿ ಹಿಡಿಯಬೇಕು ಎಂದು ಅನ್ನದಾತ ಚಿಂತೆಗೀಡಾಗಿದ್ದಾನೆ.
ಬೇಸಿಗೆ ಆರಂಭಕ್ಕೂ ಮುನ್ನವೇ ಬರಿದಾಯ್ತು ನಾಲೆಗಳು: ರೈತರಿಗೆ ಶುರುವಾಯ್ತು ಟೆನ್ಷನ್
ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿನ ರೈತರು ಕಾವೇರಿ ಹಾಗೂ ಕಬಿನಿ ಜಲಾಶಯದ ವ್ಯಾಪ್ತಿಯ ನಾಲೆ ನೀರುಗಳನ್ನು ನಂಬಿಕೊಂಡಿದ್ದು, ಈ ವರ್ಷ ಬೇಸಿಗೆ ಆರಂಭಕ್ಕೂ ಮೊದಲೇ ನಾಲೆಯಲ್ಲಿ ನೀರಿಲ್ಲದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಕಾವೇರಿ ಹಾಗೂ ಕಬಿನಿ ಜಲಾಶಯದ ವ್ಯಾಪ್ತಿಯ ನಾಲೆ ನೀರುಗಳನ್ನೇ ನಂಬಿಕೊಂಡಿದ್ದ ಜಿಲ್ಲೆಯಲ್ಲಿನ ಹಲವು ರೈತರು, ಹಿಂಗಾರು ಮಳೆಯಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ. ಆದರೀಗ ಮುಂಗಾರು ಆರಂಭಕ್ಕೂ ಮುನ್ನವೇ ನಾಲೆಗಳು ಬರಿದಾಗಿದ್ದು, ಜಾನುವಾರುಗಳಿಗೆ ನೀರಿನ ಅಭಾವ ತಪ್ಪಿಸಲು ಹಾಗೂ ತರಕಾರಿ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆಳೆಯಲು ನೀರು ಹೊಂದಿಸುವ ಚಿಂತೆ ಎದುರಾಗಿದೆ.
ಬೇಸಿಗೆ ಕಾಲದಲ್ಲಿ ಕೆರೆ ಕಟ್ಟೆಗಳೆಲ್ಲಾ ಒಣಗಿ ಹೋಗುತ್ತವೆ. ಹೀಗಿರುವಾಗ ನಾವು ನಾಲೆಯ ನೀರನ್ನೇ ಅವಲಂಬಿಸಿರುತ್ತೇವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಈ ರೀತಿಯಾದರೆ ಇನ್ನೆರಡು ತಿಂಗಳುಗಳಲ್ಲಿ ನಮ್ಮ ಜಾನುವಾರುಗಳಿಗೆ ಕುಡಿಯಲು ಸಹ ನೀರು ದೊರೆಯದಂತಾಗುತ್ತದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.