ಮೈಸೂರು : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಇತಿಹಾಸ ಪ್ರಸಿದ್ಧ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ದೀಪಾವಳಿಯ ದಿನದಂದು ದೀವಟಿಗೆ ಉತ್ಸವ ವಿಶಿಷ್ಟ ರೀತಿಯಲ್ಲಿ ನಡೆದಿದೆ. ಈ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ದೇವರಿಗೆ ಹರಕೆ ಕಟ್ಟಿಕೊಂಡು ದೇವಾಲಯಕ್ಕೆ ಆಗಮಿಸಿ ಪಂಜಿನ ಮೆರವಣಿಗೆ ಮೂಲಕ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ದೀವಟಿಗೆ ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷ.
ಮಹಾಲಯ ಅಮಾವಾಸ್ಯೆ (ಆಯುಧ ಪೂಜೆ) ಸಮಯದಲ್ಲಿ ಹೆಣ್ಣು ನೋಡುವ ಶಾಸ್ತ್ರ, ದೀಪಾವಳಿಯಂದು ನಿಶ್ಚಿತಾರ್ಥ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಭಾರತ ಹುಣ್ಣಿಮೆಯಂದು ಗಿರಿಜಾ ಕಲ್ಯಾಣ ಮಹೋತ್ಸವ ಇಲ್ಲಿನ ಪ್ರಮುಖ ಧಾರ್ಮಿಕ ಕಾರ್ಯಗಳಾಗಿವೆ. ಗಿರಿಜಾ ಕಲ್ಯಾಣಕ್ಕೂ ಪೂರ್ವಭಾವಿಯಾಗಿ ದೀಪಾವಳಿ ಹಬ್ಬದಂದು ಲಗ್ನಪತ್ರಿಕೆ ಬರೆದು ನಿಶ್ಚಿತಾರ್ಥ ನೆರವೇರಿಸಲಾಗುವ ಸಂಪ್ರದಾಯ ಬೆಟ್ಟದಪುರದ ದೇವಾಲಯದಲ್ಲಿದೆ.
ನವೆಂಬರ್ 13 ರಂದು ಭಕ್ತಾದಿಗಳು ಸುಮಾರು 3600 ಮೆಟ್ಟಲುಗಳನ್ನು ಏರುವ ಮೂಲಕ ಬೆಟ್ಟದ ಮೇಲಿರುವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅದೇ ದಿನ ರಾತ್ರಿ ಗ್ರಾಮದ ಮಧ್ಯಭಾಗದಲ್ಲಿರುವ ದೇವಾಲಯದಿಂದ ಬೆಟ್ಟದ ಮೇಲಿರುವ ದೇವಾಲಯಕ್ಕೆ ಬೆಳ್ಳಿ ಬಸಪ್ಪ, ಗಿರಿಜಾದೇವಿ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಯನ್ನು ಕೊಂಡಯ್ಯಲಾಗುತ್ತದೆ. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು ಮುಗಿಸಿದ ನಂತರ ನವೆಂಬರ್ 14ರಂದು (ಮಂಗಳವಾರ) ಬಲಿಪಾಡ್ಯಮಿ ದಿನ ಮುಂಜಾನೆ ದೇವರನ್ನು ಮರಳಿ ಗ್ರಾಮದೊಳಗೆ ತರಲಾಗಿತ್ತು.
ಹಸಿರು ಮಂಟಪಗಳ ಸೇವೆ :ಬೆಟ್ಟದಪುರ ಸೇರಿದಂತೆ ಬೆಟ್ಟವನ್ನು ಸುತ್ತುವರೆದಿರುವ ಪ್ರತಿಯೊಂದು ಗ್ರಾಮಗಳಲ್ಲಿ ಆಕರ್ಷಕ ಹಸಿರು ಮಂಟಪ (ಚಪ್ಪರ)ಗಳನ್ನು ನಿರ್ಮಾಣ ಮಾಡಿ, ಆ ಮಂಟಪದಲ್ಲಿ ಬೆಟ್ಟದಿಂದ ಹೊತ್ತು ತರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿಲಾಗುತ್ತದೆ. ಬಳಿಕ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಾದಿಗಳು ಪ್ರಾರ್ಥಿಸುತ್ತಾರೆ.