ಮೈಸೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಎರಡು ದಿನಗಳಲ್ಲೇ ಪೊಲೀಸರು ಬಂಧಿಸಿದ್ದಾರೆ. ವಿ.ವಿ.ಪುರಂನ ಕಾಳಿದಾಸ ರಸ್ತೆಯಲ್ಲಿರುವ ಟೈಲರ್ ಶಾಪ್ ಬಳಿ ವಿ.ವಿ.ಪುರಂ ನಿವಾಸಿ ಚಂದ್ರು ಎಂಬುವವವರ ಮೇಲೆ ಹಳೆ ದ್ವೇಷದ ಹಿನ್ನೆಲೆ ಮೇ.18ರಂದು ಆರೋಪಿಗಳು ಹತ್ಯೆ ಮಾಡಿದ್ದರು. ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಮೈಸೂರು ನಗರದ ಪೊಲೀಸ್ ಆಯುಕ್ತ ಬಿ.ರಮೇಶ್, ಎನ್ಆರ್ ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ್, ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಸಿಸಿಬಿ ಘಟಕದ ಎಸಿಪಿ ಸಂದೇಶ್ ಕುಮಾರ್ ಹಾಗೂ ಮಂಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯೋಗೇಶ್ ಮತ್ತು ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಈ ತಂಡವು ಮೇ 20ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಕುಖ್ಯಾತ ರೌಡಿ ತಮಿಳುನಾಡಿನ ಕಾಡಿನಲ್ಲಿ ಶವವಾಗಿ ಪತ್ತೆ:ಬೆಂಗಳೂರಿನ ಬನಶಂಕರಿ, ಜಯನಗರ ಮತ್ತು ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಕುಖ್ಯಾತ ರೌಡಿಯಾಗಿದ್ದ ಅಲ್ಯೂಮಿನಿಯಂ ಬಾಬು ತಮಿಳಿನಾಡಿನ ತಳಿ ಕಾಡಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬೆಂಗಳೂರಿನ ಪಾತಕ ಲೋಕದ ಅರಸಯ್ಯ - ಜಲ್ಲಿ ವೆಂಕಟೇಶ್ ಸಿಂಡಿಕೇಟ್ನಲ್ಲಿ ಗುರಗತಿಸಿಕೊಂಡಿದ್ದ ಈತ ಅಲ್ಯೂಮಿನಿಯಂ ಬಾಬು ಎಂದೇ ಕುಖ್ಯಾತಿಯಾಗಿದ್ದ. ಈಗ ಅರಸಯ್ಯ - ಜಲ್ಲಿ ವೆಂಕಟೇಶ್ ಇಲ್ಲವಾಗಿದ್ದರಿಂದ ಇತ್ತೀಚೆಗೆ ಐದಾರು ವರ್ಷಗಳಿಂದ ಕೊತ್ತನೂರು ದಿನ್ನೆಯಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದ.