ಮೈಸೂರು :ನಾಟಿ ಪದ್ಧತಿಯಿಂದ ಹೆಚ್ಚು ಇಳುವರಿ ಬರುವುದರಿಂದ ರೈತರಿಗೆ ನಾಟಿ ಬಗ್ಗೆ ಜಾಗೃತಿ ಮೂಡಿಸಬೇಕು. ಯೂರಿಯಾ ಮತ್ತು ಗೊಬ್ಬರಗಳ ಬಳಕೆಯಂತೆ ನ್ಯಾನೋ ಯೂರಿಯಾ ಬಳಕೆಯ ಬಗ್ಗೆಯೂ ತಿಳಿಸಿಕೊಡಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕುರಿತು ಮಾತನಾಡಿದ ಅವರು ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯದ ಕೃಷಿ ಕುರಿತು ಚರ್ಚಿಸಿದರು.
11.44 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಮಾರಾಟ:2022ರ ಮುಂಗಾರು ಹಂಗಾಮಿನಲ್ಲಿ 82.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಇದ್ದು, ಇದುವರೆಗೂ 36.47 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. 2022-23 ರ ಸಾಲಿನ ಮುಂಗಾರು ಹಂಗಾಮಿಗೆ 26.76 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ವಿವಿಧ ಗ್ರೇಡ್‌ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ. 2022ರ ಜುಲೈ 4ರ ಅಂತ್ಯಕ್ಕೆ 11.91 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ರಸಗೊಬ್ಬರ ಸರಬರಾಜಾಗಿದ್ದು, 17.85 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿನಲ್ಲಿ 11.44 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ರಸಗೊಬ್ಬರ ಮಾರಾಟವಾಗಿದೆ ಎಂದು ತಿಳಿಸಿದರು.
ಕೃಷಿ ಯಂತ್ರಧಾರೆ ವಿಸ್ತರಣೆ: ರಾಜ್ಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಕೈಗೆಟುಕುವಂತೆ ಮಾಡಲು ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಈಗಾಗಲೇ ಸ್ಥಾಪಿಸಿರುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ರಾಜ್ಯದ ಎಲ್ಲ ಹೋಬಳಿಗಳಿಗೆ ವಿಸ್ತರಿಸಲಾಗುವುದು. 2022-23 ನೇ ಸಾಲಿನಲ್ಲಿ 30 ಕೋಟಿ ರೂ. ಗಳ ಅನುದಾನವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ: ನೈಸರ್ಗಿಕ ಕೃಷಿ ಕೈಗೊಳ್ಳಲು ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ಎಲ್ಲಾ ಕೃಷಿ ಅಥವಾ ತೋಟಗಾರಿಕಾ ವಿಶ್ವವಿದ್ಯಾಲಯಗಳ ಮುಖಾಂತರ ತಲಾ 1,000 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಾರಜನಕ ಸ್ಥಿರೀಕರಣ, ಜೈವಿಕ ವಿಶ್ಲೇಷಣೆ ಅಧ್ಯಯನಗಳನ್ನು ಕೈಗೊಂಡು ರೈತರ ಹೊಲಗಳಿಗೆ ವಿಸ್ತರಿಸಲಾಗುವುದು.