ಮೈಸೂರು:ಕ್ಷುಲ್ಲಕ ಕಾರಣಕ್ಕಾಗಿ ಗ್ರಾಮದ ಮುಖಂಡನಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬವೊಂದು ಶಾಸಕರ ಮುಂದೆ ಕಣ್ಣೀರಿಟ್ಟ ಪ್ರಸಂಗ ನಂಜನಗೂಡು ತಾಲೂಕಿನ ಬೆಳಲೆ ಗ್ರಾಮದಲ್ಲಿ ನಡೆದಿದೆ.
ಶಾಸಕರ ಮುಂದೆ ಸಾಮಾಜಿಕ ಬಹಿಷ್ಕಾರದ ಸಂಕಷ್ಟ ತೋಡಿಕೊಂಡ ಬಡ ಕುಟುಂಬ ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದ್ದರೂ ಇನ್ನೂ ಕೆಲ ಗ್ರಾಮಗಳಲ್ಲಿ ಬಡಪಾಯಿಗಳಿಗೆ ಕಾಟ ಕೊಡುವ ದೊಣ್ಣೆ ನಾಯಕರು ಬೇರು ಬಿಟ್ಟಿದ್ದಾರೆ. ಸಮಾಜದಲ್ಲಿ ಅವರದ್ದೇ ಪ್ರಾಬಲ್ಯದಿಂದ ಬಡವರ ಮೇಲೆ ತಮ್ಮ ಅಟ್ಟಹಾಸ ಮೆರೆಯುತ್ತಾರೆ.
ಪ್ರಕರಣ ಹಿನ್ನೆಲೆ...
ನಂಜನಗೂಡು ತಾಲೂಕಿನ ಬೆಳಲೆ ಗ್ರಾಮದ ಭಾಗ್ಯಮ್ಮ ಎಂಬ ಮಹಿಳೆಯ ಮೇಲೆ ಗ್ರಾಮದ ಮುಖಂಡ ಚೌಡಪ್ಪ ಎಂಬ ವ್ಯಕ್ತಿ ಚಪ್ಪಲಿಯಿಂದ ಹೊಡೆದಿದ್ದ ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಭಾಗ್ಯಮ್ಮನ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ವಿಚಾರವಾಗಿ ಕೋಪಗೊಂಡಿದ್ದ ಚೌಡಪ್ಪ ಈ ಕುಟುಂಬದವರನ್ನು ಯಾರೂ ಮಾತನಾಡಿಸುವಂತಿಲ್ಲ, ಹಲ್ಲೆಗೊಳಗಾದ ಮಹಿಳೆ ಹೂ ಮಾರುತ್ತಿದ್ದು, ಆಕೆಯ ಹೂ ತೆಗೆದುಕೊಳ್ಳುವಂತಿಲ್ಲ. ಗ್ರಾಮದ ಯಾವುದೇ ಕೆಲಸಗಳಿಗೆ ಕರೆಯುವಂತಿಲ್ಲ ಹಾಗೂ ಈ ಮನೆಯವರಿಗೆ ಯಾರು ಕೂಡ ನೀರು ಸಹ ಕೊಡುವಂತಿಲ್ಲ ಎಂದು 10 ದಿನಗಳ ಹಿಂದೆ ಬಹಿಷ್ಕಾರ ಹಾಕಿದ್ದನಂತೆ.
ಶಾಸಕರ ಗಮನಕ್ಕೆ ತಂದ ಕುಟುಂಬ: ಗ್ರಾಮದ ಕುಂದುಕೊರತೆ ವಿಚಾರಿಸಲು ಬಂದ ಸ್ಥಳೀಯ ಬಿಜೆಪಿ ಶಾಸಕ ಹರ್ಷವರ್ಧನ್ ಅವರ ಮುಂದೆ ಈ ಬಹಿಷ್ಕಾರದ ಬಗ್ಗೆ ವಿವರಿಸುತ್ತ ನೊಂದ ಮಹಿಳೆ ಭಾಗ್ಯಮ್ಮ ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಟ್ಟರು. ಸ್ಥಳದಲ್ಲೇ ಸಂಬಂಧದಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕರು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದರಿಂದ ಕುಟುಂಬಕ್ಕೆ ಈಗ ನ್ಯಾಯದ ಭರವಸೆ ಸಿಕ್ಕಿದೆ. ಬಡಪಾಯಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಗ್ರಾಮದ ಮುಖಂಡನಿಗೆ ತಕ್ಕ ಶಿಕ್ಷೆ ಆಗಬೇಕಿದೆ.