ಮೈಸೂರು: 12 ವರ್ಷದ ಬಾಲಕನೊಬ್ಬ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದು, ತಮ್ಮ ಪುತ್ರನನ್ನು ಹೇಗಾದರೂ ಮಾಡಿ ಬದುಕಿಸಿಕೊಳ್ಳಲು ಪೋಷಕರು ಅವಿರತ ಶ್ರಮಿಸುತ್ತಿದ್ದಾರೆ. ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಿದರೂ, ಬಾಲಕನಿಗೆ ವಕ್ಕರಿಸಿರುವ ಕ್ಯಾನ್ಸರ್ ಗುಣಮುಖ ಆಗದ ಕಾರಣ ಅಮೆರಿಕದ ಆಸ್ಪತ್ರೆ ವೈದ್ಯರು ಚಿಕಿತ್ಸೆಗೆ ಒಪ್ಪಿಕೊಂಡಿದ್ದಾರೆ. ಆದ್ರೆ ಮಗನ ಪ್ರಾಣ ಉಳಿಸುವುದಕ್ಕಾಗಿ, ಹಣ ಹೊಂದಿಸಲು ಪೋಷಕರು ಪರದಾಡುತ್ತಿದ್ದಾರೆ.
ಧನ ಸಹಾಯಕ್ಕಾಗಿ ಪೋಷಕರು ಮನವಿ:ಅಮೆರಿಕದ ವಾಷಿಂಗ್ಟನ್ನಲ್ಲಿ ಇರುವ ಚಿಲ್ಡ್ರನ್ ನ್ಯಾಷನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಈಗ ಈ ಬಾಲಕ ಆಯ್ಕೆಯಾಗಿದ್ದು, ಚಿಕಿತ್ಸೆ ವೆಚ್ಚ ಅಂದಾಜು 1.25 ಕೋಟಿ ರೂ. ಆಗಲಿದೆ. ಚಿಕಿತ್ಸಾ ವೆಚ್ಚವನ್ನು ಭರಿಸಲು ದಾನಿಗಳು, ಸಂಘ ಸಂಸ್ಥೆಗಳಲ್ಲಿ ಧನ ಸಹಾಯಕ್ಕಾಗಿ ಬಾಲಕನ ಪೋಷಕರು ಮನವಿ ಮಾಡಿದ್ದಾರೆ.
ಮೈಸೂರಿನ ಮೇಟಗಳ್ಳಿಯ ರೈಲ್ವೆ ಕಾಲೊನಿಯಲ್ಲಿ ವಾಸವಾಗಿರುವ ವಸಂತಕುಮಾರ್ ಮತ್ತು ಶಿಲ್ಪಾ ದಂಪತಿಯ ಪುತ್ರ ಮೀತಾಕ್ಷ್ (12) ಶ್ವಾಸಕೋಶದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಾಲಕ. 2021 ಫೆಬ್ರವರಿಯಲ್ಲಿ ಈ ಬಾಲಕನಿಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂಬುದನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಪತ್ತೆ ಮಾಡಲಾಯಿತು.
ನಂತರ ಬೆಂಗಳೂರಿನ ಬಸವನಗುಡಿಯಲ್ಲಿ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ನಿರಂತರ ಚಿಕಿತ್ಸೆ ನೀಡುತ್ತಿದ್ದು, ಕ್ಯಾನ್ಸರ್ ರೋಗವು ಇನ್ನೂ ಗುಣಮುಖವಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕದ ಆಸ್ಪತ್ರೆಯಲ್ಲಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.