ಮಂಡ್ಯ: ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಆಸುಪಾಸಿನ ಗ್ರಾಮಗಳಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತರು ಬೆಳೆದಿದ್ದ ಕಬ್ಬು ಬೆಳೆ ಹಾನಿ ಮಾಡಿವೆ.
ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿರುವ ಸಲಗಗಳು, ಕಳೆದ ಮೂರು ದಿನಗಳ ಹಿಂದೆ ಹಲಗೂರು ಸಮೀಪದ ಹಾಡ್ಲಿ ಕೆರೆಯಲ್ಲಿ ಬೀಡುಬಿಟ್ಟಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಿರಲಿಲ್ಲ.
ನಂತರ ಶಿಂಷಾ ನದಿ ಮೂಲಕ ಸಾಗಿ ಬಂದು ಕೊಕ್ಕರೆ ಬೆಳ್ಳೂರಿನ ಹೊರವಲಯದಲ್ಲಿ ಪ್ರತ್ಯಕ್ಷವಾಗಿದ್ದವು. ಮದ್ದೂರು ಅರಣ್ಯ ಇಲಾಖೆಯ ತಂಡ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಕೈಗೊಂಡಿದ್ದರು. ರಾತ್ರಿವೇಳೆಗೆ ನಾಪತ್ತೆಯಾಗಿದ್ದ ಆನೆಗಳು ಇಂದು ಮುಂಜಾನೆ ಸೋಮನಹಳ್ಳಿ ಕೆರೆ ಹಿಂಭಾಗದ ಕೆ.ಕೋಡಿಹಳ್ಳಿಯ ಕಬ್ಬಿನ ಗದ್ದೆಗೆ ನುಗ್ಗಿ ಕಬ್ಬಿನ ಬೆಳೆ ಹಾನಿ ಮಾಡಿವೆ.