ಮಂಡ್ಯ: ಬೇಬಿಬೆಟ್ಟದ ಅಕ್ರಮ ಕಲ್ಲುಗಣಿಗಾರಿಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯಕ್ಕೆ ಕಲ್ಲು ಗಣಿಗಾರಿಕೆ ಕಂಟಕವಾಗಿದೆಯಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮಂಡ್ಯ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ಮೊರೆ ಹೋಗಿದೆ.
ಆದರೆ, ಟ್ರಯಲ್ ಬ್ಲಾಸ್ಟ್‌ಗೆ ರೈತರು ಹಾಗೂ ಭೂ ವಿಜ್ಞಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ರೈತರು ಬೈಕ್ ಜಾಥಾ ನಡೆಸುವ ಮೂಲಕ ಟ್ರಯಲ್ ಬ್ಲಾಸ್ಟ್ ಗೆ ನಿಗದಿಪಡಿಸಿ ಜಾಗಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಪೊಲೀಸರು ತಡೆದಿದ್ದಾರೆ. ಇದರಿಂದ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಾರ್ಖಂಡ್ ಮೂಲದ ವಿಜ್ಞಾನಿಗಳ ತಂಡ:ಸರ್ಕಾರದ ಒಪ್ಪಿಗೆ ಪಡೆದು ಜುಲೈ 25 ರಿಂದ 31 ರವರೆಗೆ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ಧತೆಗಳು ನಡೆದಿದ್ದು, ಇದಕ್ಕೆ ರೈತರು, ಭೂ ವಿಜ್ಞಾನಿಗಳು ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿದೆ.
ಜಾರ್ಖಂಡ್ ಮೂಲದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಪರೀಕ್ಷಾರ್ಥ ಬ್ಲಾಸ್ಟಿಂಗ್ ನಡೆಸಲಿದ್ದು, ಟ್ರಯಲ್ ಬ್ಲಾಸ್ಟ್ ವರದಿ ಮೂರು ತಿಂಗಳೊಳಗಾಗಿ ಬರಲಿದೆ. ಕೆಆರ್ಎಸ್ಗೆ ಗಣಿಗಾರಿಕೆಯಿಂದ ಯಾವುದೇ ಅಪಾಯ ಇಲ್ಲ ಎಂಬ ವರದಿ ಬಂದರೆ ಮತ್ತೆ ಬೇಬಿಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಹಾಗಾಗಿ ರೈತರು, ಬೇಬಿ ಗ್ರಾಮಸ್ಥರು ಹಾಗೂ ಕೆಲ ಭೂ ವಿಜ್ಞಾನಿಗಳು ಟ್ರಯಲ್ ಬ್ಲಾಸ್ಟ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.