ಮಂಡ್ಯ:ಶ್ರೀರಂಗಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳು ಕರೆ ನೀಡಿರುವ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮಕ್ಕೆ ಬಿಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಕಣ್ಣಿಡಲು ವಿಶೇಷ ಪಡೆಯನ್ನು ರಚಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಕರೆ ನೀಡಿರುವ ಶ್ರೀರಂಗಪಟ್ಟಣ ಚಲೋ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಂಜೆ 6ರವರೆಗೆ ಸೆಕ್ಷನ್ 144 ಜಾರಿಯಾಗಿದೆ.
ಇಂದು ಶ್ರೀರಂಗಪಟ್ಟಣ ಚಲೋ; ಸೆಕ್ಷನ್ 144 ಜಾರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಗರದಲ್ಲಿ 4 ಚೆಕ್ ಪೋಸ್ಟ್ ಅಳವಡಿಕೆ ಮಾಡಲಾಗಿದ್ದು, ಎಸ್ಪಿ ಯತೀಶ್ ಕುಮಾರ್ ನೇತೃತ್ವ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ:ವಿಶ್ವ ಹಿಂದೂ ಪರಿಷತ್ನಿಂದ ಜೂ.4 ರಂದು ಶ್ರೀರಂಗಪಟ್ಟಣ ಚಲೋ
ಜ್ಞಾನವಾಪಿ ಮಸೀದಿಯ ವಿವಾದ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಈ ನಿಟ್ಟಿನಲ್ಲಿ ಇಂದು ವಿಹೆಚ್‌ಪಿ ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದ್ದು, ಈ ಹೋರಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಸಹ ಯೋಜನೆ ರೂಪಿಸಿದೆ. ಜಾಮಿಯಾ ಮಸೀದಿ ಈ ಹಿಂದೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು.
ಟಿಪ್ಪು ಸುಲ್ತಾನ್ ದೇವಸ್ಥಾನದ ಮೇಲೆ ಈ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇಂದಿಗೂ ಜಾಮಿಯಾ ಮಸೀದಿಯಲ್ಲಿ ದೇವಸ್ಥಾನದ ಹಲವು ಕುರುಹುಗಳು ಇವೆ. ಇಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಗರ್ಭಗುಡಿ ಇದೆ. ಈ ನಿಟ್ಟಿನಲ್ಲಿ ನಮಗೆ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿಗೆ ವಿಹೆಚ್‌ಪಿ ಮನವಿ ಸಲ್ಲಿಸಿತ್ತು.
ಜಿಲ್ಲಾಧಿಕಾರಿಗಳು ಈ ಮನವಿಗೆ ಪೂರಕವಾಗಿ ಸ್ಪಂದಿಸದ ಕಾರಣ ವಿಹೆಚ್‌ಪಿ ಹಾಗೂ ಬಜರಂಗ ದಳದ ಪದಾಧಿಕಾರಿಗಳು ಇಂದು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದ್ದಾರೆ. ಈ ಚಲೋದಲ್ಲಿ ಸಾವಿರಾರು ಮಂದಿ ಹನುಮನ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಅಂದು ಹನುಮ ಭಕ್ತರು ಮಸೀದಿಯ ಒಳಗಡೆ ಪ್ರವೇಶ ಮಾಡಿ ಆಂಜನೇಯಸ್ವಾಮಿ ಪೂಜೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶ್ರೀರಂಗಪಟ್ಟಣ ಚಲೋ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದೆ. ಜಾಮಿಯಾ ಮಸೀದಿ ಸುತ್ತಲೂ ಪೊಲೀಸರ ಕಣ್ಗಾವಲು ಇರಿಸಲಾಗಿದೆ. ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಸೀದಿಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು, ನಿನ್ನೆಯಿಂದಲೇ ಜಾಮಿಯಾ ಮಸೀದಿ ಸುತ್ತ 144 ಸೆಕ್ಷನ್ ಜಾರಿಯಾಗಿದೆ.