ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗ ಇರುವ ಅಲ್ಲಾಪಟ್ಟಣ-ಮರಳಗಾಲ ಗ್ರಾಮಗಳ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಇದೆ ಎಂದು ಕೇಂದ್ರ ಪರಮಾಣು ಖನಿಜ ನಿರ್ದೇಶನಾಲಯ ಪರಿಶೋಧನಾ ಇಲಾಖೆ ಖಚಿತಪಡಿಸಿದೆ. ಈ ಲೀಥಿಯಂ ಬ್ಯಾಟರಿ ತಯಾರು ಮಾಡಲು ಅತ್ಯವಶ್ಯವಾಗಿದೆ.
ಇಷ್ಟು ವರ್ಷಗಳ ಕಾಲ ಭಾರತ ಬೇರೆ ದೇಶದಿಂದ ಲೀಥಿಯಂ ಆಮದು ಮಾಡಿಕೊಳ್ಳುತ್ತಿತ್ತು. ಶ್ರೀರಂಗಪಟ್ಟಣದ ಈ ಭಾಗದಲ್ಲಿ ಸುಮಾರು 16,000 ಟನ್ನಷ್ಟು ಲೀಥಿಯಂ ನಿಕ್ಷೇಪ ಇದೆ ಎಂದು ಅಣುಶಕ್ತಿ ನಿರ್ದೇಶನಾಲಯದ ವಿಜ್ಞಾನಿಗಳ ತಂಡ ಹೇಳಿದೆ. ಈ ಪ್ರದೇಶದಲ್ಲಿ ಲೀಥಿಯಂ ಅಲ್ಲದೆ ಕಾಗೆ ಬಂಗಾರದಂತಹ ಖನಿಜ ಸಂಪನ್ಮೂಲಗಳು ಸಹ ಇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಲ್ಲಾಪಟ್ಟಣ ಹಾಗೂ ಮರಳಗಾಲ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪದ ಕುರಿತು ಸಮಾರು 40 ವರ್ಷಗಳಿಂದ ವಿಜ್ಞಾನಿಗಳು ಸಂಶೋಧನೆ ನಡೆಸಿಕೊಂಡು ಬಂದಿದ್ದಾರೆ. ಇದೀಗ ಈ ವಿಜ್ಞಾನಿಗಳ ಸಂಶೋಧನೆ ಪ್ರಕಾರ ಲೀಥಿಯಂ ನಿಕ್ಷೇಪ ಇರುವುದು ಖಾತ್ರಿಯಾಗಿದೆ. ಈ ಭಾಗದ 150 ಎಕರೆ ಪ್ರದೇಶದಲ್ಲಿ ಲೀಥಿಯಂ ಇದೆ ಎಂದು ಸಹ ವಿಜ್ಞಾನಿಗಳು ಹೇಳಿದ್ದಾರೆ. ಇಲ್ಲಿರುವ ಲೀಥಿಯಂ ನಿಕ್ಷೇಪವನ್ನು ತೆಗೆಯಲು ಆಗುವ ಖರ್ಚು ಎಷ್ಟು ಮತ್ತು ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಲು ಎಷ್ಟು ಖರ್ಚಾಗುತ್ತಿದೆ ಎಂಬುದರ ಬಗ್ಗೆ ಇದೀಗ ವಿಜ್ಞಾನಿಗಳು ಸಂಶೋಧನೆಗೆ ಮುಂದಾಗಿದ್ದಾರೆ.