ಮಂಡ್ಯ: ಎಲ್ಲರ ನಿದ್ದೆಗೆಡಿಸಿರುವ ಕೊರೊನಾ ವೈರಸ್ಗೆ ಔಷಧ ಕಂಡು ಹಿಡಿಯಲು ವಿಶ್ವದಾದ್ಯಂತ ವಿಜ್ಞಾನಿಗಳು, ತಜ್ಞರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಪ್ರಗತಿಪರ ರೈತರೊಬ್ಬರು ಆಯುರ್ವೇದ ಮೂಲಕ ವೈರಸ್ ನಾಶಕ್ಕೆ ರೋಬೊವೊಂದನ್ನು ಆವಿಷ್ಕರಿಸಿದ್ದಾರೆ.
ಕೋಮೆನಹಳ್ಳಿಯ ಮಂಜೇಗೌಡ ಅವರು ರೋಬೋ ಆವಿಷ್ಕರಿಸಿರುವ ರೈತ. ಕೆ.ಆರ್. ಪೇಟೆಯ ಪ್ರವಾಸಿ ಮಂದಿರದಲ್ಲಿಟ್ಟಿದ್ದ ಪ್ರಾತ್ಯಕ್ಷಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ವೀಕ್ಷಿಸಿದರು.
ಹೇಗಿದೆ ಅದರ ಕೆಲಸ?:ನೈಸರ್ಗಿಕವಾಗಿ ಸಿಗುವ ಪುದೀನಾ ಸೊಪ್ಪು, ಬೇವು, ಶುಂಠಿ ಹಾಗೂ ಕೊಬ್ಬರಿ ಎಣ್ಣೆಯನ್ನು ಹಾಕಿ ಯಂತ್ರದೊಳಗೆ ಹಾಯಿಸಬೇಕು. ನಂತರ ಅದರಿಂದ ಹೊರ ಬರುವ ಆವಿ ನೇರವಾಗಿ ಮೂಗಿಗೆ ಅಳವಡಿಸಿರುವ ಮಾಸ್ಕ್ ಮೂಲಕ ಬಾಯಿಗೆ ಸೇರಲಿದೆ. ಆವಿ ದೇಹದೊಳಗೆ ಪ್ರವೇಶಿಸಿದಾಗ ವೈರಸ್ ಅನ್ನು ಕೊಲ್ಲಲಿದೆ. ಮಿನಿ ಐಸಿಯು ರೀತಿಯಾಗಿಯೂ ಈ ಯಂತ್ರ ಕಾರ್ಯನಿರ್ವಹಣೆ ಮಾಡಲಿದೆ ಎಂದು ಸಚಿವರಿಗೆ ವಿವರಿಸಿದರು.
ಎಸ್ಎಸ್ಎಲ್ಸಿ ಓದಿರುವ ಮಂಜೇಗೌಡರ ಸಾಧನೆಗೆ ಸಚಿವರೂ ಸೇರಿದಂತೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ಉಪಯೋಗಕ್ಕೆ ಬರಬಹುದು ಎಂಬ ಮಾತುಗಳೂ ಕೇಳಿ ಬಂದಿವೆ.