ಮಂಡ್ಯ: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಇಂದು ಸಕ್ಕರೆನಾಡಿಗೆ ಪ್ರವೇಶ ಮಾಡಿತು. ಪ್ರಜಾಧ್ವನಿ ಯಾತ್ರೆ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನ ಮಾಡಿತು. ಪ್ರಜಾಧ್ವನಿ ಸಮಾವೇಶದಲ್ಲಿ ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಕೈ ನಾಯಕರು, ಚುನಾವಣೆಗೆ ರಣಕಹಳೆ ಮೊಳಗಿಸಿದರು.
ಮೈಸೂರಿನಿಂದ ಮಂಡ್ಯಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದ ಕೈ ನಾಯಕರ ಪಡೆಗೆ ಜಿಲ್ಲೆಯಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯ್ತು. ಕ್ರೇನ್ ಮೂಲಕ ಬೃಹತ್ ಕಬ್ಬು, ಬೆಲ್ಲ ಹಾಗೂ ಪೈನಾಪಲ್ ಹಾರ ಹಾಕುವ ಮೂಲಕ ಸ್ವಾಗತ ಕೋರಲಾಯಿತು. ಮಂಡ್ಯ ವಿವಿ ಆವರಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭತ್ತ, ರಾಗಿ ರಾಶಿಗೆ ಪೂಜೆ ಮಾಡಿ, ಜ್ಯೋತಿ ಬೆಳಗುವ ಮೂಲಕ ಕಾಂಗ್ರೆಸ್ ನಾಯಕರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಇದೇ ವೇಳೆ, ಮಂಡ್ಯದ ಕಾರ್ತಿಕ್ ಎಂಬುವರು ಡಿಕೆಶಿಗೆ ಎತ್ತೊಂದನ್ನ ಉಡುಗೊರೆಯಾಗಿ ನೀಡಿ, ರಾಜ್ಯಾದ್ಯಂತ ಸಂಚರಿಸಿ ಪಕ್ಷ ಅಧಿಕಾರಕ್ಕೆ ತರಲಿ, ಸಿಎಂ ಆಗಲಿ ಅಂತಾ ಆಶಿಸಿದ್ರು. ಅಭಿಮಾನಿಕೊಟ್ಟ ಉಡುಗೊರೆಯನ್ನ ಡಿಕೆಶಿ ಪ್ರೀತಿಯಿಂದಲೇ ಸ್ವೀಕಾರ ಮಾಡಿದರು.
ನಾವು ಕೊಟ್ಟ ಮಾತನ್ನು ತಪ್ಪಲ್ಲ ಎಂದ ಸಿದ್ದರಾಮಯ್ಯ: ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್, 10ಕೆಜಿ ಅಕ್ಕಿ, ಪ್ರತಿ ಮಹಿಳೆ ಯಜಮಾನಿಗೆ ವಾರ್ಷಿಕ 24 ಸಾವಿರ ರೂಪಾಯಿ ಕೊಡುವಂತೆ ಅಧಿಕಾರಕ್ಕೆ ಬಂದ ಮೊದಲನೆ ದಿನವೇ ಆದೇಶ ಹೊರಡಿಸಲಿದ್ದೇವೆ. ಕೊಟ್ಟ ಮಾತನ್ನು ತಪ್ಪಲ್ಲ ನಾವು, ತಪ್ಪಿದರೆ ರಾಜಕೀಯದಲ್ಲೇ ಇರುವುದಿಲ್ಲ. ರಾಜಕೀಯ ಮಾಡುವುದು ಜನರಿಗೆ ಟೋಪಿ ಹಾಕುವುದಕ್ಕಲ್ಲ ಎಂದರು.