ಮಂಡ್ಯ:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಡ್ಯ ಜಿಲ್ಲಾ ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಇಂದು ಮಂಡ್ಯ ನಗರ ಹಾಗೂ ಮದ್ದೂರು ಪಟ್ಟಣ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಜಿಲ್ಲಾ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಸಭೆ ನಡೆಸಿ ಇಂದು ಬಂದ್‌ಗೆ ಕರೆ ನೀಡಿದ್ದರು. ಹೋಟೆಲ್, ಬೇಕರಿ, ಚಲನಚಿತ್ರ ಮಂದಿರ ಸೇರಿದಂತೆ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಆಟೋ ಚಾಲಕರು, ಖಾಸಗಿ ವಾಹನ ಮಾಲೀಕರು, ಸ್ಟುಡಿಯೋ ಮಾಲೀಕರು, ಜಿಲ್ಲೆಯ ಎಲ್ಲಾ ವರ್ಗದ ಜನತೆ, ವಿದ್ಯಾರ್ಥಿ ಸಮೂಹ, ರೈತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘಟನೆಗಳು ಸ್ವಯಂಪ್ರೇರಿತವಾಗಿ ಬಂದ್‌ನಲ್ಲಿ ಭಾಗವಹಿಸಿ ಬೆಂಬಲ ಸೂಚಿಸುತ್ತಿವೆ. ಕಾವೇರಿ ಪ್ರತಿಯೊಬ್ಬರ ಹಕ್ಕು. ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ, ನಾಗಮಂಗಲ ತಾಲೂಕುಗಳಲ್ಲಿ ಬಂದ್ ಮಾಡಲು ಸಹಕರಿಸುವಂತೆ ಜಿಲ್ಲಾ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ.
ರಾಜ್ಯ ಸರ್ಕಾರ, ವಿರೋಧ ಪಕ್ಷಗಳು, ಸಂಸದರಿಗೆ ಇದೊಂದು ಎಚ್ಚರಿಕೆಯ ಪಾಠವಾಗಬೇಕಿದೆ. ಕಾವೇರಿ ರಾಜ್ಯದ ಆಸ್ತಿಯಾಗಿದ್ದು, ಇದನ್ನು ರಕ್ಷಿಸಬೇಕಾಗಿರುವುದು ಎಲ್ಲರ ಕರ್ತವ್ಯವೂ ಆಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳು, ಸಂಘ ಸಂಸ್ಥೆಗಳು ಬಂದ್‌ನಲ್ಲಿ ಭಾಗವಹಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.