ಮಂಡ್ಯ: ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮತ ಗಳಿಕೆಯಲ್ಲಿ ಚೇತರಿಕೆ ಕಂಡುಬಂದಿದೆ.
ಒಟ್ಟು 230 ಗ್ರಾಮ ಪಂಚಾಯತ್ಗಳ ಪೈಕಿ 1,481 ಕ್ಷೇತ್ರಗಳ 3,797 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇವರಲ್ಲಿ 548 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಮದ್ದೂರು ತಾಲೂಕಿನ ಕದಲೂರು ಗ್ರಾಮ ಪಂಚಾಯತ್ನ ಎಲ್ಲಾ 12 ಸ್ಥಾನಗಳನ್ನು ಸಹ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ವಿವಿಧ ಕಾರಣಗಳಿಂದಾಗಿ 4 ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ.
ಮಂಡ್ಯದಲ್ಲಿ ಮುನ್ನಡೆ ಸಾಧಿಸಿದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕೆ.ಆರ್. ಪೇಟೆ, ನಾಗಮಂಗಲ, ಮದ್ದೂರು ತಾಲೂಕುಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮಳವಳ್ಳಿ, ಮಂಡ್ಯ ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ. ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನಲ್ಲಿ ಕಾಂಗ್ರೆಸ್ ಮತ್ತು–ಜೆಡಿಎಸ್ ಬೆಂಬಲಿತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಜೆಡಿಎಸ್ ಬೆಂಬಲಿತರು ಗೆಲುವು ಕಂಡಿದ್ದಾರೆ.
ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರೆಂದು ಹೇಳಲು ಯಾರೂ ಇರಲಿಲ್ಲ. ಆದರೆ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕೆಲವೆಡೆ ಉತ್ತಮ ಪೈಪೋಟಿ ನೀಡಿದ್ದಾರೆ. ಕೆ.ಆರ್. ಪೇಟೆ, ಮದ್ದೂರು, ಮಳವಳ್ಳಿ ಹಾಗೂ ಪಾಂಡವಪುರ ತಾಲೂಕಿನಲ್ಲಿ ಬಿಜೆಪಿ ಬೆಂಬಲಿತರು ಉತ್ತಮ ಮತ ಗಳಿಸಿದ್ದಾರೆ. ಆದ್ರೆ ನಾಗಮಂಗಲ ತಾಲೂಕಿನಲ್ಲಿ ಮಾತ್ರ ಕಳಪೆ ಪ್ರದರ್ಶನ ಕಂಡು ಬಂದಿದೆ.
ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರ ಪ್ರಾಬಲ್ಯ
ಎಣಿಕೆ ಪ್ರಕ್ರಿಯೆ ಶಾಂತಿಯುತ
ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿ ಎಲ್ಲಾ ಏಳು ತಾಲೂಕು ಕೇಂದ್ರಗಳಲ್ಲಿ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
ಮಂಡ್ಯದ ಸರ್ಕಾರಿ ಮಹಾ ವಿದ್ಯಾಲಯ, ಮದ್ದೂರಿನ ಎಚ್.ಕೆ. ವೀರಣ್ಣಗೌಡ ಕಾಲೇಜು, ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜು, ಪಾಂಡವಪುರದ ಪಿಎಸ್‌ಎಸ್‌ಕೆ ಪ್ರೌಢಶಾಲೆ, ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಆರ್. ಪೇಟೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ನಾಗಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯಿತು.
ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 513 ಮೇಜುಗಳನ್ನು ಸಿದ್ಧಗೊಳಿಸಲಾಗಿತ್ತು. ಪ್ರತಿ ಮೇಜಿಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕರು ಸೇರಿ ಒಟ್ಟು 513 ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. 1,026 ಎಣಿಕೆ ಸಹಾಯಕರು ಸೇರಿ ಒಟ್ಟು 1,128 ಮಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಎಣಿಕೆ ಆರಂಭಗೊಂಡ ನಂತರ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್ ಮರೆತ ಮಂಡ್ಯ ಜನತೆ
ಎಲ್ಲಾ ಮತ ಎಣಿಕೆ ಕೇಂದ್ರಗಳ ಎದುರು ತಲಾ 10 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಬಹುತೇಕ ಮಂದಿ ಮಾಸ್ಕ್ ಕೂಡ ಧರಿಸಿರಲಿಲ್ಲ. ಪೊಲೀಸರು ಮಾಸ್ಕ್ ಧರಿಸಿರುವ ಬಗ್ಗೆ ಪರಿಶೀಲನೆ ಮಾಡದೇ ಆವರಣದೊಳಗೆ ಬಿಡುತ್ತಿರುವುದು ಕಂಡುಬಂದಿದೆ. ಗೆಲುವು ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳನ್ನು ಎತ್ತಿ ಹಿಡಿದು ಸಂಭ್ರಮಿಸುತ್ತಿದ್ದರು. ಈ ವೇಳೆ ಪರಸ್ಪರ ಸಾಮಾಜಿಕ ಅಂತರ ಮಾಯವಾಗಿತ್ತು. ಒಟ್ಟಾರೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ದೃಶ್ಯಗಳು ಹೆಚ್ಚಿನ ಕಡೆಗಳಲ್ಲಿ ಕಂಡುಬಂದಿತು.