ಮಂಡ್ಯ: ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ ಪುನರಾರಂಭದ ಎಲ್ಲ ಕ್ರೆಡಿಟ್ ಅಕ್ಕನಿಗೆ ಹೋಗಲಿ. ನಮ್ಮದೇನು ಹೋರಾಟ ಇಲ್ಲ. ಅವರೊಬ್ಬರೇ ಹೋರಾಟ ಮಾಡಿ ಕಾರ್ಖಾನೆ ಆರಂಭಿಸಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವ್ಯಂಗ್ಯವಾಡಿದರು.
ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಜನರಿಗೆ ಮಾತು ಕೊಟ್ಟಿದ್ದರಂತೆ. ಹಾಗಾಗಿ ಅವರೊಬ್ಬರೇ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ 50 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಮೈಶುಗರ್ ಕಾರ್ಖಾನೆ ಪ್ರಾರಂಭ ಮಾಡಿಸಿದ್ದಾರೆ. ಅವರೊಬ್ಬರೇ ಹೋರಾಟ ಮಾಡಿದ್ದಾರೆ, ಆದ್ದರಿಂದ ಎಲ್ಲಾ ಕ್ರೆಡಿಟ್ ಅವರಿಗೆ ಹೋಗಲಿ ಎಂದು ಕಿಡಿಕಾರಿದರು.
ಇದನ್ನೂ ಓದಿ:ಮಂಡ್ಯದ ಮೈಶುಗರ್ ಕಾರ್ಖಾನೆ ಪುನಾರಂಭ: ಬಾಯ್ಲರ್ಗೆ ಅಗ್ನಿ ಸ್ಪರ್ಶಿಸಿ ಚಾಲನೆ
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ವಹಿಸಿ ಈಗ ಏನಾಗಿದೆ ಅಂತ ಜಿಲ್ಲೆಯ ಜನರಿಗೆ ಗೊತ್ತಾಗಿದೆ. ಕೆಲವರಿಗೆ ಮೈಶುಗರ್ ಕಾರ್ಖಾನೆ ಪುನರಾರಂಭದ ಆಲೋಚನೆಯೇ ಇರಲಿಲ್ಲ. ಮೈಶುಗರ್ ಆಸ್ತಿ ಮೇಲೆ ಕಣ್ಣು ಬಿದ್ದಿತ್ತು. ಹಾಗಾಗಿ, ಕಾರ್ಖಾನೆಯನ್ನು ಖಾಸಗಿಗೆ ವಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ಮೈಶುಗರ್ ಕಾರ್ಖಾನೆ ಆರಂಭದ ವಿಚಾರವಾಗಿ ಜೆಡಿಎಸ್ ಪಕ್ಷದ ಅಜೆಂಡಾ ಒಂದೇ ಆಗಿತ್ತು. ಸರ್ಕಾರವೇ ಕಾರ್ಖಾನೆ ನಡೆಸಬೇಕು ಎಂಬುದು ಜೆಡಿಎಸ್ ಹೋರಾಟವಾಗಿತ್ತು ಎಂದರು.