ಮಂಡ್ಯ:ನಾನೇನಾದರೂ ಹೆಚ್.ಡಿ.ದೇವೇಗೌಡರ ಮಗನಾಗಿದ್ದರೆ ನನ್ನ ರಾಜಕೀಯ ಭವಿಷ್ಯ ಇವತ್ತೇ ಕೊನೆಯಾದರೂ ಕೂಡ ಅವರಿಗೆ ನೋವು ಕೊಟ್ಟು ರಾಜಕಾರಣ ಮಾಡುತ್ತಿರಲಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಡ್ಯದಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ಹಳೆಯ ಪಾರ್ಟಿ ಜೆಡಿಎಸ್ ಇವತ್ತು ಹೇಗಾಗಿದೆ?, ದೇವೇಗೌಡ್ರು ಇಲ್ಲಿವರೆಗೆ ಬಿಜೆಪಿ ಜೊತೆ ಸೇರಲ್ಲ ಎಂದು ಕಠಿಣವಾಗಿ ಮಾತನಾಡಿದ್ದಾರೆ. ಅದನ್ನು ನಾನು ರಿಪೀಟ್ ಮಾಡಲ್ಲ. ಕುಮಾರಸ್ವಾಮಿ ರಾಜ್ಯದಲ್ಲಿ ಎರಡು ಸಲ ಸಿಎಂ ಆಗಿದ್ದಾರೆ. ದೇವೇಗೌಡ್ರು ಹೊರತುಪಡಿಸಿದರೆ ಕುಮಾರಸ್ವಾಮಿ ಏನು? ಎಂದರು.
ಯಾರೂ ಸಹ ಕೆಂಗಲ್ ಹನುಮಂತಯ್ಯನವರಿಂದ ಇಲ್ಲಿಯವರೆಗೆ ತಂದೆ ಬದುಕಿರುವುವಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಇತಿಹಾಸ ಕರ್ನಾಟಕದಲ್ಲಿ ಇದೆಯೇ?, ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ ತೀರಿಕೊಂಡ ಬಳಿಕ ಬಸವರಾಜ ಬೊಮ್ಮಾಯಿ ಸಿಎಂ ಆದರು. ಅಂತಹ ತಂದೆಯ ಮನಸ್ಸಿಗೆ ನೋವು ಮಾಡಿ ಯಾರಿಗೂ ಹೇಳದೆ ಕೇಳದೆ ಕುಮಾರಸ್ವಾಮಿ ಓಡಿ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸೇರುತ್ತಾರೆಂದರೆ ಬಿಜೆಪಿ ಮತ್ತು ಜೆಡಿಎಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದಕ್ಕೆ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾವು ಬಹಳ ಸ್ಟ್ರಾಂಗ್ ಆಗಿದ್ದೇವೆ ಎಂದು ಹೇಳಿದರು.
ಬಿಜೆಪಿಯವರು ಸುಮ್ಮನಿರಲಾಗದೇ ಕೈ ಪರಚುಕೊಳ್ಳುತ್ತಿದ್ದಾರೆ. ಯಾವುದೇ ವಿಚಾರವಿಲ್ಲದೇ ಅತ್ಯಂತ ಹೀನಾಯ ಸ್ಥಿತಿ ತಲುಪಿದ್ದಾರೆ. ಬಿಜೆಪಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ರಾಜ್ಯದ ಬಿಜೆಪಿ ಮುಖಂಡರನ್ನು ಮಾತನಾಡಿಸುವ ಸೌಜನ್ಯ ಆ ಪಕ್ಷದ ರಾಷ್ಟ್ರೀಯ ನಾಯಕರಿಗೆ ಇಲ್ಲ ಎಂದು ಟೀಕಿಸಿದರು.