ಕರ್ನಾಟಕ

karnataka

ETV Bharat / state

ಬೇಬಿ ಬೆಟ್ಟದಲ್ಲಿ ಮತ್ತೆ ಗಣಿ ಚಟುವಟಿಕೆ ಆರಂಭ

ಬೇಬಿ ಬೆಟ್ಟದ ಕಡೆಯಿಂದ ಲಾರಿ ಮತ್ತು ಟಿಪ್ಪರ್‌ಗಳು ಕಲ್ಲಿನ ಉತ್ಪನ್ನಗಳನ್ನು ತುಂಬಿಕೊಂಡು ಬರುತ್ತಿರುವುದು ಗಣಿ ಚಟುವಟಿಕೆ ಆರಂಭಗೊಂಡಿರುವುದಕ್ಕೆ ಸಾಕ್ಷಿಯಾಗಿದೆ.

ಬೇಬಿ ಬೆಟ್ಟದಲ್ಲಿ ಗಣಿ ಚಟುವಟಿಕೆ ಮತ್ತೆ ಆರಂಭ
ಬೇಬಿ ಬೆಟ್ಟದಲ್ಲಿ ಗಣಿ ಚಟುವಟಿಕೆ ಮತ್ತೆ ಆರಂಭ

By

Published : Sep 25, 2021, 1:48 PM IST

ಮಂಡ್ಯ: ಜಿಲ್ಲಾಧಿಕಾರಿ ಹೇರಿದ್ದ ನಿಷೇಧಾಜ್ಞೆಯನ್ನು ರಾಜ್ಯ ಹೈಕೋರ್ಟ್‌ ರದ್ದುಪಡಿಸಿದ ಬೆನ್ನಲ್ಲೇ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಗಣಿ ಚಟುವಟಿಕೆಗಳು ಆರಂಭಗೊಂಡಿವೆ.

ಬೇಬಿ ಬೆಟ್ಟದ ಕಡೆಯಿಂದ ಲಾರಿ ಮತ್ತು ಟಿಪ್ಪರ್‌ಗಳು ಕಲ್ಲಿನ ಉತ್ಪನ್ನಗಳನ್ನು ತುಂಬಿಕೊಂಡು ಬರುತ್ತಿರುವುದು ಗಣಿ ಚಟುವಟಿಕೆ ಆರಂಭಗೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಅಲ್ಲಿ ಗಣಿ ಗುತ್ತಿಗೆ ಪಡೆದಿರುವ 28 ಗಣಿ ಮಾಲೀಕರಿಗೆ ಹೈಕೋರ್ಟ್ ರಿಲೀಫ್ ನೀಡಿರುವುದರಿಂದ ಅವರೆಲ್ಲರೂ ಗಣಿ ಚಟುವಟಿಕೆ ಮತ್ತೆ ಪ್ರಾರಂಭ ಮಾಡಿದ್ದಾರೆ.

ನಾಮಕೇವಾಸ್ತೆ ಕೆಲಸ ಮಾಡುತ್ತಿರುವ ಚೆಕ್ ಪೋಸ್ಟ್​​ಗಳು :

ಅನಧಿಕೃತ ಕಲ್ಲು ಸಾಗಣಿಕೆ ತಡೆಯಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಓವ‌ರ್‌ಲೋಡ್‌ ಮಾಡಿಕೊಂಡು ಬರುವುದನ್ನು ತಡೆಯುವ ಸಲುವಾಗಿ ಜಿಲ್ಲೆಯ 11 ಕಡೆ ಸ್ಥಾಪಿಸಿದ್ದ ಚೆಕ್ ಪೋಸ್ಟ್​​​ಗಳು ನಾಮಕೇವಾಸ್ತೆಯಾಗಿ ಉಳಿದುಕೊಂಡಿವೆ. ಕೆಲವು ದಿನಗಳಿಂದ ಈ ಚೆಕ್‌ಪೋಸ್ಟ್‌ಗಳಲ್ಲಿ ಹೋಂಗಾರ್ಡ್ ಬಿಟ್ಟರೆ ಯಾರೂ ಇರದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸೆ.17ರಂದು ರದ್ದುಗೊಳಿಸಿದ್ದ ಹೈಕೋರ್ಟ್‌: ಕೆಆರ್‌ಎಸ್ ಜಲಾಶಯದ ಸಮೀಪದಲ್ಲಿರುವ ಬೇಬಿಬೆಟ್ಟದಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವಲ್ಲದೇ, ಕೆಲವು ವರದಿಗಳು ಎಚ್ಚರಿಕೆ ನೀಡಿದ್ದವು. ಆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಲ್ಲು ಗಣಿಗಾರಿಕೆ ಮೇಲೆ ಜು.31ರಂದು ನಿಷೇಧ ಹೇರಿ ಬೇರೆ ಬೆಟ್ಟದಲ್ಲಿದ್ದ 28 ಗಣಿ ಗುತ್ತಿಗೆಗಳನ್ನು ರದ್ದುಪಡಿಸಿತ್ತು.

ಯಾವುದೇ ಸಕಾರಣ ನೀಡದೇ ಕಾನೂನಾತ್ಮಕವಾಗಿ ಗಣಿಗಾರಿಕೆ ನಡೆಸುತ್ತಿದ್ದವರ ಗುತ್ತಿಗೆಗಳನ್ನು ರದ್ದುಪಡಿಸಿರುವ ಜಿಲ್ಲಾಡಳಿತದ ವಿರುದ್ಧ ಗಣಿ ಮಾಲೀಕರು ರಾಜ್ಯ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಜಿಲ್ಲಾಡಳಿತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಸೆ.17ರಂದು ಹೈಕೋರ್ಟ್‌ ರದ್ದುಪಡಿಸಿ ಆದೇಶ ಹೊರಡಿಸಿತ್ತು.

ಅಕ್ಟೋಬರ್ 8ರಂದು ಅಹವಾಲು ಆಲಿಕೆ: ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಕಲ್ಲು ಗಣಿ ಮಾಲೀಕರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಅಕ್ಟೋಬರ್ 8ಕ್ಕೆ ದಿನಾಂಕ ನಿಗದಿಪಡಿಸಿ ನೋಟೀಸ್ ಜಾರಿ ಮಾಡಿದ್ದಾರೆ. ಗಣಿ ಮಾಲೀಕರ ಅಹವಾಲು ಅಲಿಸಿದ ನಂತರ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳುವುದಕ್ಕೆ ಡಿಸಿಗೆ ಅಧಿಕಾರ ನೀಡಿರುವುದಾಗಿ ನ್ಯಾಯಪೀಠ ತಿಳಿಸಿದೆ.

ABOUT THE AUTHOR

...view details