ಮಂಡ್ಯ: ಈಕೆ ಸರೋಜಮ್ಮ. ಮೂರು ತಿಂಗಳಿಗೆ ಒಬ್ಬರಂತೆ ಒಂದೇ ವರ್ಷದಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ವೃದ್ಧೆ. ತನ್ನ ಮಕ್ಕಳ ಆಶ್ರಯದಲ್ಲಿರಬೇಕಾದಾಗ ಇಳಿವಯಸ್ಸಲ್ಲಿ ಮೊಮ್ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿದ್ದಾರೆ. ತಲೆ ಮೇಲೊಂದು ಸೂರಿಲ್ಲ. ಆದರೆ ಬದುಕಬೇಕಲ್ಲ?. ಪೆಟ್ಟಿಗೆ ಅಂಗಡಿಯಲ್ಲಿ ಪೇಪರ್, ಹಾಲು ಮಾರುತ್ತಾರೆ.
ಜೀವನದ ಸಂಧ್ಯಾಕಾಲದಲ್ಲೂ ಸ್ವಾಭಿಮಾನವನ್ನೇ ಉಸಿರಾಡುತ್ತಿದ್ದಾರೆ. ಆದರೂ ತನ್ನ ಅಸಹಾಯಕತೆಗೆ ಕೆಲವೊಮ್ಮೆ ಮರುಗುತ್ತಾರೆ. ಮಂಡ್ಯದ ನೂರಡಿ ರಸ್ತೆಯ ವಾಟರ್ ಟ್ಯಾಂಕ್ ಬಳಿಯ ಪೆಟ್ಟಿಗೆ ಅಂಗಡಿಯೇ ಈಕೆಯ ಬದುಕಿಗಾಸರೆ. ಮೂಲತಃ ಟಿ.ನರಸೀಪುರದವರು. 50-60 ವರ್ಷಗಳ ಹಿಂದೆ ಮಂಡ್ಯಕ್ಕೆ ಬಂದು ನೆಲೆಸಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳಿದ್ದರು. ಓರ್ವ ಕುಮಾರ್ ಎಂಬಾತ ವಿಶೇಷಚೇತನ. ವಿಶೇಷಚೇತನನಾದರೂ ನನ್ನಂತೆ ಅಂಗವೈಕಲ್ಯದಿಂದ ನರಳುತ್ತಿದ್ದ ಬೇರೆಯವರ ಕಷ್ಟ-ಕಾರ್ಪಣ್ಯಕ್ಕೆ ಸದಾ ತುಡಿಯುತ್ತಿದ್ದ ಜೀವವದು. ದೇಹದ ಅಂಗಾಗಗಳು ಸರಿ ಇದ್ದಿದ್ರೆ, ಮದುವೆಯಾಗಿ ಕುಟುಂಬ, ಸಂಸಾರ ಅಂತಿ ಇರ್ತಿದ್ರು. ಮಗನಿಗೆ ಸದಾ ಆಸರೆಯಾಗಿದ್ದವರು ಸರೋಜಮ್ಮ. ವಿಶೇಷಚೇತನ ಪುತ್ರನಿಗೆ ಸ್ಥಳೀಯಾಡಳಿತ ಪೆಟ್ಟಿಗೆ ಅಂಗಡಿ ಕೊಟ್ಟಿತು. ಆತನಿಗೆ ಬರುತ್ತಿದ್ದ ಮಾಸಾಶನ ಮತ್ತು ಅಂಗಡಿ ವ್ಯಾಪಾರದಲ್ಲೇ ತಾಯಿ-ಮಗನ ಜೀವನ ಸಾಗುತಿತ್ತು. ಆದರೆ, ಕಳೆದ ಒಂದೂವರೆ ವರ್ಷದಿಂದ ಸರೋಜಮ್ಮನವರ ಮೂವರು ಮಕ್ಕಳು ಮೂರು ತಿಂಗಳಿಗೆ ಒಬ್ಬರಂತೆ ಪ್ರಾಣ ಕಳೆದುಕೊಂಡಿದ್ದಾರೆ.