ಮಂಡ್ಯ: ಕೆಆರ್‌ಎಸ್ ಡ್ಯಾಂ ಸುರಕ್ಷತೆಗೆ ನಿರಂತರ ಹೋರಾಟ ನಡೆಯುತ್ತಿದ್ದರೆ ಮತ್ತೊಂದೆಡೆ, ಜಿಲ್ಲಾಡಳಿತವೇ ಡ್ಯಾಂ ಹಿನ್ನೀರಿನಲ್ಲಿ ಜಲಕ್ರೀಡೆಗೆ ಅನುಮತಿ ಕೊಟ್ಟಿರುವುದೆಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಕೆಆರ್‌ಎಸ್ ಅಣೆಕಟ್ಟೆ ಭದ್ರತೆ ದೃಷ್ಟಿಯಿಂದ ಒಂದೂವರೆ ಕಿಲೋಮೀಟರ್ ಹಿನ್ನೀರಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಯಮ ಉಲ್ಲಂಘನೆ ಬಗ್ಗೆ ಎಚ್ಚರಿಕೆ ವಹಿಸಬೇಕಿದ್ದ ಜಿಲ್ಲಾಡಳಿತವೇ ಇದೀಗ ನಿಯಮ ಉಲ್ಲಂಘಿಸಿ, ಭಾರತೀಯ ಸೇನೆ ಮೈಸೂರು ಮಲ್ಟಿ ಕ್ಲಾಸ್ ಸೈಲಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಿದೆ.
ಕೆಆರ್‌ಎಸ್ ಹಿನ್ನೀರಿನಲ್ಲಿ ನಡೆಯುತ್ತಿರುವ ಸೈಲಿಂಗ್ ಸ್ಪರ್ಧೆ ಮೊನ್ನೆಯಿಂದ ಆರು ದಿನಗಳ ಕಾಲ ನಡೆಯುತ್ತಿರುವ ಈ ಸೈಲಿಂಗ್ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹಾಗೂ ಜಿಲ್ಲಾಧಿಕಾರಿ ಚಾಲನೆ ನೀಡಿದ್ದರು. ಕನ್ನಂಬಾಡಿ ಅಣೆಕಟ್ಟೆ ಸುರಕ್ಷತೆಗೆ ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಆದ್ರೆ ಸೈಲಿಂಗ್ ಸ್ಪರ್ಧೆ ಆಯೋಜನೆಯಿಂದ ಡ್ಯಾಂ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಮೋಟಾರ್ ಬೋಟ್, ಹಾಯಿ ದೋಣಿ ಬಳಕೆಯಿಂದ ನೀರು ಕಲುಷಿತಗೊಳ್ಳುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಕೆ.ಆರ್.ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಇಂತಹ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಇದೀಗ ಜಲ ಕ್ರೀಡೆಗೆ ಅನುಮತಿ ಕೊಟ್ಟಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.