ಮಂಡ್ಯ: ಹನುಮ ಜಯಂತಿ ನಿಮಿತ್ತ ಸಕ್ಕರೆ ನಗರಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಂಕೀರ್ತನಾ ಯಾತ್ರೆ ಶಾಂತಿಯುತವಾಗಿ ನೆರವೇರಿತು. ಸಾವಿರಾರು ಮಾಲಾಧಾರಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ರು.
ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಜಾಗದಲ್ಲಿ ಮೂಡಲ ಬಾಗಿಲ ಆಂಜನೇಯ ಸ್ವಾಮಿ ಪುನರ್ ಪ್ರತಿಷ್ಠಾಪನೆ ಸಂಕಲ್ಪದೊಂದಿಗೆ ಬೃಹತ್ ಶೋಭಾ ಸಂಕೀರ್ತನಾ ಯಾತ್ರೆ ಆಯೋಜನೆ ಮಾಡಲಾಗಿತ್ತು. ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ ಹನುಮ ಮಾಲಾಧಾರಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ರು.
ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಿಂದ ರಂಗನಾಥ ಸ್ವಾಮಿ ದೇವಸ್ಥಾನದವರೆಗೂ ಸುಮಾರು ಮೂರು ಕಿಲೋಮೀಟರ್ ಮೆರವಣಿಗೆ ಜರುಗಿತು. ಯಾತ್ರೆಗೂ ಮೊದಲು ವೇದಿಕೆ ಕಾರ್ಯಕ್ರಮವನ್ನು ನಿಮಿಷಾಂಬ ದೇವಸ್ಥಾನದ ಬಳಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಹನುಮ ನಮ್ಮ ಧರ್ಮ, ರಾಮ ನಮ್ಮ ಸಂಸ್ಕೃತಿ, ಧೈರ್ಯ, ಸಮರ್ಪಣೆ. ಶ್ರೀ ರಾಮ ಸರ್ವ ಶ್ರೇಷ್ಠ ವ್ಯಕ್ತಿ. ರಾಮನ ಹೃದಯದಲ್ಲಿ ಹನುಮಂತನಿದ್ದಾನೆ. ಪವಿತ್ರ ಅಯೋಧ್ಯೆಯಲ್ಲಿ ಮತ್ತೊಮ್ಮೆ ರಾಮ ಮಂದಿರ ನಿರ್ಮಾಣವಾಗಲಿದೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಜಗತ್ತಿಗೆ ನಾಗರಿಕತೆ ಹೇಳಿಕೊಟ್ಟದ್ದು ನಮ್ಮ ಜನ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಹಿಂದೂ ಧರ್ಮದ ನಿದರ್ಶನಗಳಿವೆ ಎಂದರು.