ಮಂಡ್ಯ: ಜನರು ತಮಗೆ ಎದುರಾಗುವ ವಿಘ್ನಗಳನ್ನ ನಿವಾರಣೆ ಮಾಡಿಕೊಳ್ಳಲು ಗಣಪತಿ ಆರಾಧನೆ ಮಾಡುತ್ತಾರೆ. ಆದ್ರೆ ಗಣೇಶನ ಮೂರ್ತಿಗಳನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಕಲಾವಿದರು ಇದೀಗ ಮಹಾಮಾರಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದ 20 ಕ್ಕೂ ಹೆಚ್ಚು ಕುಟುಂಬಗಳು ಗಣೇಶನ ಮೂರ್ತಿ ತಯಾರಿಕೆಯನ್ನೇ ತಮ್ಮ ಕಸುಬಾಗಿ ಮಾಡಿಕೊಂಡಿವೆ. ಮೂರ್ನಾಲ್ಕು ದಶಕಗಳಿಂದ ಗೌರಿ, ಗಣೇಶ ಮೂರ್ತಿ ತಯಾರಿಸಿಕೊಂಡು ಬದುಕು ಕಟ್ಟಿಕೊಂಡಿದ್ದ ಇವರು, ಮಂಡ್ಯ ಮಾತ್ರವಲ್ಲದೇ ಹಳೇ ಮೈಸೂರು ಭಾಗದ ಹಲವು ಜಿಲ್ಲೆಗಳಿಗೆ ಗಣೇಶ ವಿಗ್ರಹಗಳನ್ನ ಪೂರೈಸುತ್ತಿದ್ದರು. ಆದ್ರೆ ಕಳೆದ ವರ್ಷದಿಂದ ಕೊರೊನಾ ಹೊಡೆತಕ್ಕೆ ಒಳಗಾಗಿ ಗಣೇಶನ ಮೂರ್ತಿ ಮಾರಾಟದಲ್ಲಿ ನಷ್ಟ ಉಂಟಾಗಿದೆ.
ಕೊರೊನಾದಿಂದ ಕಂಗಾಲದ ಗಣೇಶ ಮೂರ್ತಿ ತಯಾರಕರು ಕಳೆದ ವರ್ಷ ಅರ್ಧಕ್ಕಿಂತ ಹೆಚ್ಚು ಗಣೇಶನ ಮೂರ್ತಿಗಳು ಮಾರಾಟವಾಗಿರಲಿಲ್ಲ. ಈ ವರ್ಷ ವಿಜೃಂಭಣೆಯ ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು, ಹಬ್ಬವನ್ನು ಮನೆಗೆ ಮಾತ್ರ ಸೀಮಿತ ಮಾಡಿದೆ. ಇದರಿಂದಾಗಿ ಗಣೇಶ ಮೂರ್ತಿ ತಯಾರಕರಿಗೆ ದಿಕ್ಕು ತೋಚದಂತಾಗಿದ್ದು, ಸಂಷ್ಟಕ್ಕೆ ಸಿಲುಕಿದ್ದಾರೆ.
ಹಬ್ಬಕ್ಕೆ ಆರು ತಿಂಗಳಿರುವಾಗಲೇ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಗಣಪತಿ ಮೂರ್ತಿ ತಯಾರಿ ಕಾರ್ಯ ಆರಂಭಿಸುತ್ತೇವೆ. ಮೊದಲು ಗಣೇಶ ಚತುರ್ಥಿ ಒಂದೂವರೆ ತಿಂಗಳು ಇರುವಾಗಲೇ ಮೂರ್ತಿಗಳು ಬೇಕೆಂದು ಬುಕಿಂಗ್ ಮಾಡುತ್ತಿದ್ರು. ಆದ್ರೆ ಕೊರೊನಾ ಮೂರನೇ ಅಲೆ ಭೀತಿಯಿಂದಾಗಿ ಸರ್ಕಾರ ಮತ್ತೆ ಯಾವ ನಿಯಮ ಜಾರಿಗೆ ತರುತ್ತದೆಯೋ ಗೊತ್ತಿಲ್ಲ. ನಾವು ಈಗಾಗಲೇ ಸಂಕಷ್ಟದಲ್ಲಿದ್ದು, ನಮಗೆ ಪರಿಹಾರ ನೀಡಬೇಕೆಂದು ಗಣೇಶ ಮೂರ್ತಿ ತಯಾರಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.