ಮಂಡ್ಯ: ಕಾವೇರಿ ವಿಚಾರವಾಗಿ ಮೂರು ದಶಕಗಳ ಹೋರಾಟ ಮಾಡಿ ಧಣಿದಿದ್ದ ಹಿತರಕ್ಷಣಾ ಸಮಿತಿ ಮೈಶುಗರ್ ವಿಚಾರವಾಗಿ ಇಬ್ಭಾಗವಾಗಿ ಹೋರಾಟ ನಡೆಸುತ್ತಿವೆ.
ಮೈಶುಗರ್‌ಗಾಗಿ ಇಬ್ಭಾಗವಾದ ರೈತ ಹಿತ ರಕ್ಷಣಾ ಸಮಿತಿ: ಒ ಅಂಡ್ ಎಂ ನಡುವೆ ಸಮರ - ಮೈ ಶುಗರ್ಸ್ ಮಂಡ್ಯ
ಕಾವೇರಿಗಾಗಿ ಹುಟ್ಟಿಕೊಂಡ ರೈತ ಹಿತರಕ್ಷಣಾ ಸಮಿತಿ ಈಗ ಇಬ್ಭಾಗವಾಗಿದೆ. ಇಬ್ಭಾಗಕ್ಕೆ ಕಾರಣವಾಗಿದ್ದು ಮೈಶುಗರ್ ಪ್ರಾರಂಭದ ವಿಷಯ. ಒಂದು ಗುಂಪು ಸರ್ಕಾರವೇ ನಡೆಸಬೇಕು ಎಂದರೆ, ಮತ್ತೊಂದು ಗುಂಪು ಹೇಗಾದರೂ ಸರಿ ಕಾರ್ಖಾನೆ ಆರಂಭ ಮಾಡಿ ಎಂಬ ಹೋರಾಟಕ್ಕೆ ಧುಮುಕಿದೆ.
ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ. ಮಾದೇಗೌಡರ ನೇತೃತ್ವದಲ್ಲಿ ಮೈಶುಗರ್ ಕಾರ್ಖಾನೆ ಒ ಅಂಡ್ ಎಂ ಬೇಡ, ಸರ್ಕಾರವೇ ನಡೆಸಲಿ ಎಂದು ಹೋರಾಟ ಮಾಡಿತ್ತು. ಈಗ ಸಮಿತಿ ಕಾರ್ಯದರ್ಶಿ, ಮಾಜಿ ಶಾಸಕ ಎಚ್.ಡಿ. ಚೌಡಯ್ಯ ನೇತೃತ್ವದಲ್ಲಿ ಪರವಾಗಿ ಹೋರಾಟ ಮಾಡಲಾಗುತ್ತಿದೆ. ಸಮಿತಿ ಅಧ್ಯಕ್ಷ ಜಿ. ಮಾದೇಗೌಡರ ಜೊತೆ ರೈತ ಸಂಘ, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಕೆಲ ಮುಖಂಡರು ನಿಂತಿದ್ದಾರೆ. ಸರ್ಕಾರವೇ ಕಾರ್ಖಾನೆ ನಡೆಸಿದರೆ ಬೆಲೆ ನಿಗದಿ ಸುಲಭ ಎಂಬುದು ಸಮಿತಿಯ ವಾದವಾಗಿದೆ.
ಆದರೆ ಮತ್ತೊಂದು ಗುಂಪು ಒ ಅಂಡ್ ಎಂ ಆಧಾರದಲ್ಲಿ ಕಾರ್ಖಾನೆ ಆರಂಭ ಮಾಡಲಿ ಎಂದು ಹೋರಾಟ ಮಾಡುತ್ತಿದೆ. ಮಾಜಿ ಶಾಸಕ ಎಚ್.ಡಿ ಚೌಡಯ್ಯ, ಜಿ.ಬಿ ಶಿವಕುಮಾರ್ ಹೋರಾಟ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ಸಂಸದೆ ಸುಮಲತಾ ಅಂಬರೀಶ್ ಬೆಂಬಲವಾಗಿ ನಿಂತಿದ್ದಾರೆ. ಹೋರಾಟದ ನಡುವೆಯೂ ಪರ ವಿರುದ್ಧದ ಅಪಸ್ವರ ರೈತರಲ್ಲಿ ಎದ್ದಿದೆ. ಕಾವೇರಿ ವಿಚಾರದಲ್ಲಿ ಇದ್ದ ಒಗ್ಗಟ್ಟು ಮೈಶುಗರ್ ವಿಚಾರದಲ್ಲಿ ಇಲ್ಲವಾಗಿದೆ. ಇದರಿಂದ ರೈತರು ಗೊಂದಲಕ್ಕೆ ಒಳಗಾಗಿದ್ದಾರೆ.