ಸಮಾಧಿ ಮಾಡಿಕೊಂಡು ರೈತನಿಂದ ವಿಭಿನ್ನ ಪ್ರತಿಭಟನೆ ಮಂಡ್ಯ :ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸಕ್ಕರೆ ನಾಡು ಮಂಡ್ಯದಲ್ಲಿ ಪ್ರತಿಭಟನೆಗಳು ಮುಂದುವರಿದಿದೆ. ರಾಜ್ಯ ಸರ್ಕಾರ ಮತ್ತು ತಮಿಳುನಾಡು ವಿರುದ್ಧ ರೈತರು ನಿರಂತರವಾಗಿ ಆಕ್ರೋಶ ಹೊರಹಾಕುತ್ತಿದ್ದು, ಇದೀಗ ಕಾವೇರಿ ಹೋರಾಟಗಾರರೊಬ್ಬರು ವಿನೂತನ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದೆ. ಇದರ ವಿರುದ್ಧ ಶಿವಕುಮಾರ್ ಆರಾಧ್ಯ ಎಂಬ ರೈತ ಉಪ್ಪಾರಕನಹಳ್ಳಿ ಗ್ರಾಮದಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜಮೀನಿನಲ್ಲಿ ಗುಂಡಿಯನ್ನು ತೋಡಿ ಶಿರ ಮಾತ್ರ ಕಾಣುವಂತೆ ಇಡೀ ಶರೀರವನ್ನು ಮಣ್ಣಿನಿಂದ ಮುಚ್ಚಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರನ್ನು ಜೀವಂತ ಸಮಾಧಿ ಮಾಡುತ್ತಿದೆ. ಇಷ್ಟು ದಿನ ವಿರೋಧಿ ಘೋಷಣೆ ಕೂಗುತ್ತಿದ್ದೆವು. ಇನ್ನು ಅವರ ಪರವಾಗಿ ಘೋಷಣೆ ಕೂಗುತ್ತೇವೆ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿಗೆ ಧಿಕ್ಕಾರದ ಬದಲಿಗೆ ಜೈಕಾರ ಕೂಗುತ್ತಲೇ ರೈತ ಆಕ್ರೋಶ ಹೊರಹಾಕಿದರು.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವುದಿಲ್ಲ. ವರುಣನ ಕೃಪೆಯಿಂದ ಜಲಾಶಯ ತುಂಬುತ್ತಿದೆ. ರೈತರನ್ನು ಸಮಾಧಿ ಮಾಡುವುದನ್ನು ಬಿಟ್ಟು, ಇನ್ನಾದರೂ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಲಿ ಎಂದು ರೈತ ಕೋರಿದ್ದಾರೆ.
ಮದ್ಯದ ಬಾಟಲಿ, ಚಡ್ಡಿ ಹಿಡಿದು ಪ್ರತಿಭಟನೆ: ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಪ್ರತಿಬಟನೆ ಹೆಚ್ಚುತ್ತಲೇ ಇದೆ ಜೊತೆಗೆ ಪ್ರತಿಭಟನೆಯ ಶೈಲಿಯು ವಿಭಿನ್ನವಾಗಿದೆ. ಒಂದೆಡೆ ಮಣ್ಣಲ್ಲಿ ಮುಚ್ಚಿಕೊಂಡು ಪ್ರತಿಭಟನೆ ನಡೆಸಿದರೆ ಇನ್ನೊಂದೆಡೆ ಮಂಡ್ಯದಲ್ಲಿ ಸರ್ಕಾರದ ವಿರುದ್ದ ಮದ್ಯದ ಬಾಟಲಿ, ಚಡ್ಡಿ ಹಿಡಿದು ಪ್ರತಿಭಟಿಸಿದರು. ಸರ್ಕಾರದ ಮಂತ್ರಿಗಳಿಗೆ ಚಡ್ಡಿ ಚಿಂತೆ, ರಾಜ್ಯದ ರೈತರಿಗೆ ನೀರಿನ ಚಿಂತೆ, ಹಳ್ಳಿ ಹಳ್ಳಿಗಳಿಗೆ ಬೀರು-ಬಾರು ಬೇಡ, ನೀರಾವರಿ ಯೋಜನೆ ಜಾರಿ ಮಾಡಿ ಎಂದು ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಕೂಡ ಧರಣಿ ಮುಂದುವರೆಸಿದ್ದು ಇಲ್ಲಿ ಇಬ್ಬರು ವ್ಯಕ್ತಿಗಳು ಯಮ ಹಾಗೂ ಚಿತ್ರಗುಪ್ತನ ವೇಷ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ಮಂಡ್ಯದಲ್ಲಿ ಯಮ, ಚಿತ್ರಗುಪ್ತನ ವೇಷ ಧರಿಸಿ ಪ್ರತಿಭಟನೆ; ವರುಣ ಕೃಪೆಗೆ ಕಾವೇರಿ ಮಾತೆಗೆ ಪೂಜೆ