ಮಂಡ್ಯ:ಕುಮಾರಸ್ವಾಮಿ ಸರ್ಕಾರ ಬೀಳಬಾರದು. ಸಾಲಬಾಧೆ ಹೆಚ್ಚಾಗಿದೆ. ನನ್ನ ಮಕ್ಕಳ ಭವಿಷ್ಯ ರೂಪಿಸಿ. ಯಡಿಯೂರಪ್ಪನವರೇ, ಕುಮಾರಣ್ಣ ಸರ್ಕಾರ ಕೆಡವಬೇಡಿ... ಹಿಗೆಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ ಸುರೇಶ್ ಮನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿದ್ದರು.
ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಸಿಎಂ ಕುಮಾರಸ್ವಾಮಿಯವರ ಅಭಿಮಾನಿ ರೈತ!
ಕೆ.ಆರ್. ಪೇಟೆ ತಾಲೂಕಿನ ಅಘಲಯ ಗ್ರಾಮದ ರೈತ ಸುರೇಶ್ ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ಸೆಲ್ಫಿ ವಿಡಿಯೋ ಮಾಡಿ ತನ್ನ ಕಷ್ಟವನ್ನು ಸಿಎಂ ಕುಮಾರಸ್ವಾಮಿಗೆ ತಿಳಿಸಿದ್ದರು. ರಾತ್ರಿ ವಿಡಿಯೋ ನೋಡಿದ ಕುಮಾರಸ್ವಾಮಿ ಮಧ್ಯರಾತ್ರಿಯೇ ಪ್ರವಾಸ ನಿರ್ಧಾರ ಮಾಡಿ ಅಘಲಯಕ್ಕೆ ಆಗಮಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸುರೇಶ್ ಪತ್ನಿ ಜಯಶೀಲ, ಪುತ್ರಿ ಸುವರ್ಣ, ಪುತ್ರ ಚಂದ್ರಶೇಖರ್ ತಮ್ಮ ನೋವನ್ನು ತೋಡಿಕೊಂಡರು. ಮಾಹಿತಿ ಪಡೆದ ಕುಮಾರಸ್ವಾಮಿ ನಂತರ 5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಣೆ ಮಾಡಿ ನೌಕರಿಯ ಭರವಸೆ ನೀಡಿದರು. ಜೊತೆಗೆ ಸುರೇಶ್ ಪುತ್ರಿಗೆ ಶಿಕ್ಷಣ ಪೂರೈಸುವಂತೆ ಸಲಹೆ ನೀಡಿದರು.
ನೆನಪಾಯಿತು ಮಂಡ್ಯ... ಮೃತ ರೈತನ ಮನೆಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ
ರಾಜ್ಯದ ಎಲ್ಲಾ ಕಡೆ ಕೆರೆಗಳನ್ನ ತುಂಬಿಸುವ ಕೆಲಸ ಆಗಬೇಕಿದೆ. ಸುರೇಶ್ ಕೆರೆಗಳನ್ನ ತುಂಬಿಸಿ ಎಂದು ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ 213 ಕೋಟಿ ವೆಚ್ಚದಲ್ಲಿ ಈ ಭಾಗದ ಕೆರೆಗಳನ್ನ ತುಂಬಿಸುವ ಕಾರ್ಯ ಆರಂಭವಾಗಲಿದೆ. ಆತುರ ಪಟ್ಟು ಆತ್ಮಹತ್ಯೆಯ ದಾರಿಯನ್ನ ರೈತರು ಹಿಡಿಯಬಾರದು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಮೃತ ರೈತ ಸುರೇಶ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ನಾನು ಹಳ್ಳಿಯ ಜನರಿಗೆ ಧೈರ್ಯ ತುಂಬಲು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದೇನೆ. ನಾನು ಗಿಮಿಕ್ಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಗಿಮಿಕ್ ಅಂತ ಯಡಿಯೂರಪ್ಪ ಹೇಳುತ್ತಾರೆ. ನಾನು ಎಲ್ಲಾ ಜಿಲ್ಲಾಧಿಕಾರಿಗಳಿಂದ ಗ್ರಾಮಗಳ ಮಾಹಿತಿ ಪಡೆದಿದ್ದೇನೆ. ಆದರೆ, ಬಿಜೆಪಿ ನಾಯಕರು ಗ್ರಾಮ ವಾಸ್ತವ್ಯ ಬೇಡ, ಬರಪರಿಹಾರ ಅಧ್ಯಯನ ಮಾಡಿ ಎನ್ನುತ್ತಿದ್ದಾರೆ. ನಾನು ಸ್ಟಾರ್ ಹೋಟೆಲ್ಗಳನ್ನು ನೋಡಿದ್ದೇನೆ, ಸಣ್ಣ ಹಳ್ಳಿಯಲ್ಲೂ ವಾಸ್ತವ್ಯ ಮಾಡಿದ್ದೇನೆ ಎಂದು ತಾವು ಕಳೆದ ಹಳೆಯ ದಿನಗಳ ಬಗ್ಗೆಯೂ ವಿವರಿಸಿದರು.
ಮಾಧ್ಯಮಗಳ ಮುನಿಸಿನ ಬಗ್ಗೆಯೂ ಪ್ರಸ್ತಾಪ ಮಾಡಿ, ನಿಮ್ಮಗಳ ಜೊತೆ ನಾನು ಮಾತನಾಡುತ್ತಿರಲಿಲ್ಲ ಎಂದರು. ಭೇಟಿ ನಂತರ ಗ್ರಾಮಸ್ಥರ ಬಳಿ ಮನವಿ ಸ್ವೀಕಾರ ಮಾಡಿದ ಸಿಎಂ, ಕೆರೆ ತುಂಬಿಸುವ ಭರವಸೆ ನೀಡಿ, ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.