ಮಂಡ್ಯ :ಇತ್ತೀಚೆಗೆ ಉತ್ತರಕನ್ನಡಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಿಟಿ ರವಿ ಅವರು ಪ್ರತಿಕ್ರಿಯಿಸಿದ್ದು, 'ನಾನು ಹುಟ್ಟಿರೋದೇ ಮಾಂಸ ತಿನ್ನೋ ಜಾತಿಯಲ್ಲಿ. ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ ಎಂದು ಮಂಡ್ಯದಲ್ಲಿ ಸ್ಪಷ್ಟಪಡಿಸಿದ್ದಾರೆ.
ಭಟ್ಕಳಕ್ಕೆ ಹೋದಾಗ ನಾಗಬನ ನೋಡಲು ಕರೆದಿದ್ದರು. ಹೊಸದಾಗಿ ದೇವಾಲಯ ಕಟ್ಟಲಾಗಿತ್ತು. 45 ದಿನಗಳು ಓಪನ್ ಇರಲಿಲ್ಲ. ನಾಗಬನದ ಹೊರಾವರಣದಲ್ಲಿ ನಿಂತು ದರ್ಶನ ಪಡೆದಿದ್ದೇವೆ. ನನಗೆ ದೇವರ ಬಗ್ಗೆ ಶ್ರದ್ಧೆ ಇದೆ. ದೇವಾಲಯಕ್ಕೆ ನಾನ್ ವೆಜ್ ತಿಂದು ಹೋಗಿಲ್ಲ. ನಾನು ಹುಟ್ಟಿರುವುದೇ ಮಾಂಸ ತಿನ್ನೋ ಜಾತಿಯಲ್ಲಿ. ಆದರೆ, ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ ಎಂದರು.
ದೇವರ ಬಗ್ಗೆ ಶ್ರದ್ಧೆ ಇದೆ - ಸಿಟಿ ರವಿ: ಸುಮ್ಮನೆ ವಿವಾದ ಹುಟ್ಟು ಹಾಕಲು ಕೆಲವರು ಹೀಗೆ ಮಾಡ್ತಿದ್ದಾರೆ. ವ್ರತ, ಪೂಜೆಗಳನ್ನ ಆಚರಿಸುವವನು ನಾನು. ದೇವರ ಬಗ್ಗೆ ಶ್ರದ್ಧೆ ಇದೆ. ಮಾಂಸ ತಿನ್ನುತ್ತೇನೆ. ಹಾಗಂತ ತಿಂದು ದಾರ್ಷ್ಟ್ಯ ತೋರಿಸಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗ್ತೀನಿ. ಏನಿವಾಗ, ಯಾರು ಏನ್ ಮಾಡ್ತಾರೆ ಅನ್ನೋ ರೀತಿ ಹೇಳಲ್ಲ ಎಂದು ಕಿಡಿಕಾರಿದರು.
ಏನಿದು ವಿವಾದ:ಇತ್ತೀಚೆಗೆ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಬಾಡೂಟ ಸೇವಿಸಿ ಬಳಿಕ ಶಾಸಕರು ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಬಗ್ಗೆ, ಬಾಡೂಟ ಸೇವಿಸುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.