ಮಂಡ್ಯ:ಆರ್. ಅಶೋಕ್‌ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯ ಬಿಜೆಪಿಯಲ್ಲಿ ಅಸಮಾಧಾನ ತೀವ್ರಗೊಂಡಿದೆ. ನಿನ್ನೆಯಷ್ಟೇ ಗೋ ಬ್ಯಾಕ್ ಅಶೋಕ್ ಅಭಿಯಾನ ಆರಂಭಿಸಿದ್ದವರು ಇದೀಗ ಬಾಯ್ಕಾಟ್ ಪೋಸ್ಟರ್ ಹಾಕ್ತಿದ್ದಾರೆ. ಅಶೋಕ್ ಮಂಡ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡ್ತಾರೆ. ಅಶೋಕ್ ಅವರಿಂದ ಮಂಡ್ಯದಲ್ಲಿ ಬಿಜೆಪಿ ಬೆಳೆಯಲ್ಲ. ಅಶೋಕ್ ಗೋ ಬ್ಯಾಕ್ ಎಂಬ ಕೂಗು ಕೇಳಿ ಬರ್ತಿದೆ. ಒಂದೆಡೆ ಗೋ ಬ್ಯಾಕ್, ಬಾಯ್ಕಾಟ್ ಅಭಿಯಾನ ಮಾಡಿದ್ರೆ. ಮತ್ತೊಂದೆಡೆ ಬಹಿರಂಗವಾಗಿಯೇ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ದಿಢೀರ್ ಬದಲಾವಣೆ ಮಂಡ್ಯ ಬಿಜೆಪಿಯಲ್ಲಿ ಬಂಡಾಯ ಭುಗಿಲೇಳುವಂತೆ ಮಾಡಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ನೇಮಕವಾಗ್ತಿದ್ದಂತೆ ಸಚಿವ ಆರ್.ಅಶೋಕ್ ವಿರುದ್ಧ ಸ್ವಪಕ್ಷೀಯರೇ ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಅಭಿಯಾನ ನಡೆಸಿದರು. ಅದರ ಮುಂದುವರಿದ ಭಾಗವಾಗಿ ಇಂದು ಗೋಡೆಗಳಿಗೆ ಪೋಸ್ಟರ್ ಅಂಟಿಸುವ ಗೋ ಬ್ಯಾಕ್ ಜೊತೆಗೆ ಬಾಯ್ಕಾಟ್ ಮಾಡುವ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕ್ತಿದ್ದಾರೆ. ಮಂಡ್ಯದ ಆರ್.ಪಿ.ರಸ್ತೆ, ಸ್ಟೇಡಿಯಂ ರಸ್ತೆ ಹಾಗೂ ಇಂಡುವಾಳು ಸೇರಿದಂತೆ ಹಲವೆಡೆ ಪೋಸ್ಟರ್ ಅಂಟಿಸಿ, ಸಚಿವ ಆರ್. ಅಶೋಕ್ ನೇಮಕವನ್ನು ವಿರೋಧ ಮಾಡ್ತಿದ್ದಾರೆ.
ಬಹಿರಂಗವಾಗಿಯೇ ಅಸಮಾಧಾನ:ಇನ್ನು ಸೋಷಿಯಲ್ ಮೀಡಿಯಾ ಮತ್ತು ಪೋಸ್ಟರ್ ಗಳ ಮೂಲಕ ಪರೋಕ್ಷವಾಗಿ ಪ್ರತಿರೋಧ ವ್ಯಕ್ತಪಡಿಸ್ತಿರೋದು ಒಂದೆಡೆಯಾದರೆ. ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಹಿರಿಯ ಬಿಜೆಪಿ ನಾಯಕ ಯತ್ತಗದಹಳ್ಳಿ ಡಾ.ಸಿದ್ದರಾಮಯ್ಯ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕಳೆದ ಲೋಕಸಭಾ ಪರಾಜಿತ ಅಭ್ಯರ್ಥಿಯಾಗಿರುವ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿ ಮತ್ತು ರಾಷ್ಟ್ರೀಯ ಪರಿಷತ್ ಸದಸ್ಯರಾಗಿರುವ ಸಿದ್ದರಾಮಯ್ಯ, ಅಶೋಕ್ ವಿರುದ್ಧ ಹೊಂದಾಣಿಕೆ ರಾಜಕಾರಣದ ಆರೋಪ ಇದೆ.
ಈ ಹಿಂದೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದರಂತೆ. ಪಕ್ಷದ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳಲ್ಲ ಎನ್ನುವ ಆರೋಪ ಕೂಡ ಇದೆ. ಚುನಾವಣೆ ಹೊಸ್ತಿಲಲ್ಲಿ ಜಿಲ್ಲಾ ಉಸ್ತುವಾರಿ ಬದಲಾವಣೆ ಅವಶ್ಯಕತೆ ಇರಲಿಲ್ಲ. ನನಗೆ ಸಾಕಷ್ಟು ಕಾರ್ಯಕರ್ತರು ಕರೆ ಮಾಡ್ತಿದ್ದಾರೆ. ಮತ್ತೆ ಹೊಂದಾಣಿಕೆ ಬಗ್ಗೆ ಆತಂಕ, ದುಗುಡ ವ್ಯಕ್ತಪಡಿಸ್ತಿದ್ದಾರೆ. ನಮಗೆ ಪಕ್ಷ ಮತ್ತು ಕಾರ್ಯಕರ್ತರ ಹಿತವೇ ಮುಖ್ಯ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವಷ್ಟು ದೊಡ್ಡವನಲ್ಲ. ಆದರೆ, ನಾನು ಪಕ್ಷಕ್ಕೆ ನಿಷ್ಠಾವಂತ ಆಗಿದ್ದೇನೆ. ಜಿಲ್ಲೆಯ ಪರಿಸ್ಥಿತಿ ಬಗ್ಗೆ ವರಿಷ್ಠರ ಗಮನಕ್ಕೆ ತರುವ ಕೆಲಸ ಮಾಡ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ.