ಮಂಡ್ಯ: ಮಾರ್ಚ್ 12ರಂದು ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯನ್ನು ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದು, ಈ ಹಿನ್ನೆಲೆ ಕಾರ್ಯಕ್ರಮದ ಸಿದ್ದತೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದಶಪಥ ಹೆದ್ದಾರಿ ಉದ್ಘಾಟನೆ ನಂತರ ಬೃಹತ್ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ಭರ್ಜರಿ ಯಶಸ್ಸು ಕಾಣಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಈಗಾಗಲೇ ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿ ಬೃಹತ್ ಸಮಾವೇಶಗಳು ನಡೆದಿವೆ. ಆ ಎರಡು ಕಾರ್ಯಕ್ರಮಗಳಿಗಿಂತ ಮಂಡ್ಯದ ಕಾರ್ಯಕ್ರಮ ಬಹುದೊಡ್ಡ ಕಾರ್ಯಕ್ರಮವಾಗಬೇಕು. ಹೀಗಾಗಿ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮನೆಯಿಂದ ಒಬ್ಬೊಬ್ಬ ಕಾರ್ಯಕರ್ತರನ್ನು ಕರೆತರುವ ವ್ಯವಸ್ಥೆ ಮಾಡಬೇಕು ಎಂದರು. ಕಾಂಗ್ರೆಸ್ ಕಾರ್ಯಕ್ರಮಗಳಿಗೆ 500 ರೂ. ಕೊಟ್ಟು ಕರೆತನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ, ನಮ್ಮ ಪಕ್ಷದಲ್ಲಿ ಯಾವ ಕಾಲಕ್ಕೂ ಆ ರೀತಿ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಮೋದಿ, ಅಮಿತ್ ಶಾ ಬಂದರೇ ಕಾರ್ಯಕರ್ತರು ತಾವಾಗಿಯೇ ಬರ್ತಾರೆ ಎಂದು ಹೇಳಿದರು.
ಮಂಡ್ಯದ ರೋಡ್ ಶೋ ಬೆಸ್ಟ್ ಶೋ ಆಗಬೇಕು: ಬಳಿಕ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಜಿಲ್ಲೆಗೆ ನಮ್ಮ ಹೆಮ್ಮೆಯ ಪ್ರಧಾನಿಗಳು ಬರ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ರೋಡ್ ಶೋಗಳಿಗಿಂತ ಮಂಡ್ಯದ ರೋಡ್ ಶೋ ಬೆಸ್ಟ್ ಶೋ ಆಗಬೇಕು. ಇಡೀ ದೇಶವೇ ಮಂಡ್ಯವನ್ನು ತಿರುಗಿ ನೋಡುವಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.