ಮಂಡ್ಯ:ಬಿರುಗಾಳಿ ಸಹಿತ ಬಂದ ಭಾರೀ ಮಳೆಗೆ ಕಟಾವಿಗೆ ಹತ್ತಿರವಾಗಿದ್ದ ಬಾಳೆತೋಟ ನಾಶವಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಕೀಳನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಬಿರುಗಾಳಿ ಸಹಿತ ಮಳೆಗೆ ಬಾಳೆತೋಟ ನಾಶ... ಕಂಗಾಲಾದ ರೈತ
ಇನ್ನೇನು ಬಾಳೆ ಬೆಳೆ ಕೈ ಸೇರುವ ನಿರೀಕ್ಷೆಯಲ್ಲಿದ್ದ ರೈತನಿಗೆ ಬಿರುಗಾಳಿ ಸಹಿತ ಬಂದ ಭಾರೀ ಮಳೆ ಎರವಾಗಿದೆ. ಹನಿ ನೀರಾವರಿ ಪದ್ಧತಿ ಮೂಲಕ ಬಾಳೆ ಬೆಳೆದಿದ್ದ ರೈತ ಮಳೆಯಿಂದಾಗಿ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ರೈತ ಸ್ವಾಮಿ ಎಂಬುವರಿಗೆ ಸೇರಿದ ಬೆಳೆ ನಷ್ಟವಾಗಿದ್ದು ಕಂಗಾಲಾಗಿದ್ದಾನೆ. ಇನ್ನೊಂದು ತಿಂಗಳಲ್ಲಿ ಕಟಾವಾಗಬೇಕಿದ್ದ ಬಾಳೆ ಗೊನೆಗಳು ನೆಲಕ್ಕುರುಳಿದ್ದು, 5 ಲಕ್ಷಕ್ಕೂ ಹೆಚ್ಚಿನ ನಷ್ಠ ಸಂಭವಿಸಿದೆ. ಮೂರೂವರೆ ಎಕರೆ ಭೂಮಿಯಲ್ಲಿ ಬೆಳೆದಿದ್ದ ಒಂದೂವರೆ ಸಾವಿರಕ್ಕೂ ಹೆಚ್ಚಿನ ಏಲಕ್ಕಿ, ಬಾಳೆ ಗಿಡಗಳು ಅರ್ಧಕ್ಕೇ ಮುರಿದಿದ್ದು, ಬಾಳೆ ಗೊನೆಯ ಸಮೇತವಾಗಿ ನೆಲಕ್ಕುರುಳಿವೆ.
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೇಸಾಯ ಮಾಡಿದ್ದರಿಂದ ಬಂಪರ್ ಬಾಳೆ ಬೆಳೆ ಬಂದಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಬಿರುಗಾಳಿ ರೈತನ ಆಸೆಯನ್ನು ಚಿವುಟಿ ಹಾಕಿದೆ.