ಮಂಡ್ಯ:ಹಳೆ ಮೈಸೂರು ಭಾಗದ ಜನರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವಕ್ಕೆ ಬೆಂಬಲ ಕೊಡಬೇಕು. ಭಾರತವನ್ನು ಮತ್ತಷ್ಟು ಸದೃಢ ರಾಷ್ಟ್ರವನ್ನಾಗಿ ಜಗತ್ತಿಗೆ ತೋರಿಸಬೇಕು. ಆದ್ದರಿಂದ ಈ ಭಾಗದಲ್ಲಿ ಬಿಜೆಪಿಯನ್ನು ಅತಿ ಹೆಚ್ಚು ಬೆಂಬಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ಇದನ್ನೂ ಓದಿ:ಮಂಡ್ಯ: ಮೆಗಾ ಹಾಲಿನ ಡೈರಿ ಉದ್ಘಾಟಿಸಿದ ಅಮಿತ್ ಶಾ
ಮಂಡ್ಯದಲ್ಲಿಂದು ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಿಎಫ್ಐ ಸಂಘಟನೆ ಮೇಲಿದ್ದ 150 ಕೇಸ್ಗಳನ್ನು ವಾಪಸ್ ಪಡೆಯಲಾಗಿತ್ತು. ಇದು ಎಂತಹ ಅನಾಹುತಕ್ಕೆ ಕಾರಣವಾಗಿತ್ತು ಅನ್ನೋದು ಗೊತ್ತಿದೆ. ಈಗ ನರೇಂದ್ರ ಮೋದಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡುವ ಕೆಲಸ ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ದೆಹಲಿಗೆ ಎಟಿಎಂ:ಜೆಡಿಎಸ್ ಹಾಗೂ ಕಾಂಗ್ರೆಸ್ ಆಡಳಿತವನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ದೆಹಲಿಗೆ ಎಟಿಎಂ ಆಗುತ್ತದೆ, ಜೆಡಿಎಸ್ ಆಡಳಿತದಲ್ಲಿ ಕರ್ನಾಟಕ ಒಂದು ಕುಟುಂಬಕ್ಕೆ ಎಟಿಎಂ ಆಗುತ್ತದೆ. ಈ ಎರಡೂ ಪಕ್ಷಗಳೂ ಭ್ರಷ್ಟಾಚಾರದ ಮೂಲಕ ಈ ನೆಲದ ಅಭಿವೃದ್ಧಿಯನ್ನು ತಡೆಯುತ್ತಾ ಬಂದಿವೆ ಎಂದು ಅಮಿತ್ ಶಾ ಟೀಕಿಸಿದರು.
ವಲ್ಲಭಭಾಯ್ ಪಟೇಲ್ ರೀತಿ ಅಮಿತ್ ಶಾ: ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿ, ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಅಮಿತ್ ಶಾ ಅವರನ್ನು ಹೋಲಿಸಿದರು. ಉಕ್ಕಿನ ಮನುಷ್ಯ ವಲ್ಲಭಭಾಯ್ ಪಟೇಲ್ ಅವರ ರೀತಿ ಅಮಿತ್ ಶಾ ಎಂದು ಹೇಳಿದರು. ಅಖಂಡತೆ, ಏಕತೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ವಿಶ್ವಮಾನ್ಯತೆ ಪಡೆದಿದೆ ಎಂದರು.
ಎಲ್ಲೆಡೆ ಬಿಜೆಪಿ ಗಾಳಿ: ಅಮಿತ್ ಶಾ ಎಲ್ಲಿ ಚುನಾವಣೆಗೆ ತಂತ್ರ ಹೆಣೆಯುತ್ತಾರೋ ಅಲ್ಲಿ ಯಶಸ್ಸು ಸಿಕ್ಕಿದೆ. ನರೇಂದ್ರ ಮೋದಿ, ಅಮಿತ್ ಶಾ ನಾಯಕತ್ವದಲ್ಲಿ ಗುಜರಾತ್ ಚುನಾವಣೆ ಗೆದ್ದಿದ್ದೇವೆ. ಕರ್ನಾಟಕದಲ್ಲೂ ಎಲ್ಲ ಕಡೆ ಬಿಜೆಪಿ ಗಾಳಿ ಬೀಸುತ್ತಿದೆ. ಅಮಿತ್ ಶಾ ಕಾಲಿಟ್ಟ ಮೇಲೆ ಕರ್ನಾಟಕದಲ್ಲಿ ಸುನಾಮಿಯಾಗಿ, 2023ಕ್ಕೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಮುಂಬರುವ ಚುನಾವಣೆಯಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜ್ಯ ನಾಯಕರೊಂದಿಗೆ ಅಮಿತ್ ಶಾ ಮಹತ್ವದ ಸಭೆಯಲ್ಲಿ ಈಶ್ವರಪ್ಪ, ಜಾರಕಿಹೊಳಿ ಭವಿಷ್ಯ ನಿರ್ಧಾರ?
ಕಬ್ಬು ಬೆಳೆಗಾರರಿಗೆ ಆತ್ಮವಿಶ್ವಾಸ ತುಂಬುವ ಕೆಲಸ: ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಈ ಭಾಗದ ನೀರಾವರಿ, ಸಕ್ಕರೆ ಕಾರ್ಖಾನೆ ಬಗ್ಗೆ ತೀರ್ಮಾನ ಕೈಗೊಳ್ಳಲಿಲ್ಲ. ಮೈಶುರ್ ಆರಂಭದಿಂದ ಕಬ್ಬು ಬೆಳೆಗಾರರ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದೇವೆ. ಈ ಮೂಲಕ ರೈತರ ಲಾಭದಾಯಕ ಕಾರ್ಖಾನೆ ಮಾಡುತ್ತೇವೆ. ಕಾರ್ಖಾನೆಯಲ್ಲಿ ಮೊಲಾಸಸ್ (ಉಪ ಉತ್ಪನ್ನ) ಉತ್ಪಾನೆ ಮಾಡಲಾಗುತ್ತದೆ ಎಂದು ಹೇಳಿದರು.
ಮಂಡ್ಯ ಇಸ್ ಇಂಡಿಯಾ: ಮಂಡ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಅಧಿಕ ಸ್ಥಾನವನ್ನು ಬಿಜೆಪಿ ಪಡೆಯುತ್ತದೆ. ಮಂಡ್ಯ ಇಸ್ ಇಂಡಿಯಾ ಅಂತಾ ಎಲ್ಲರಿಗೂ ಗೊತ್ತಿದೆ. ಈ ಭಾಗದಲ್ಲಿ ಕೈಗಾರಿಕಾ, ನೀರಾವರಿ ಅಭಿವೃದ್ಧಿಯಾದರೆ ಮಾತ್ರ ಪ್ರಗತಿ ಸಾಧ್ಯ. ನರೇಂದ್ರ ಮೋದಿ ಪ್ರಧಾನಿ ಆದ್ಮೇಲೆ ಮೈಸೂರು ಮತ್ತು ಬೆಂಗಳೂರು ಸೂಪರ್ ಹೆದ್ದಾರಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಹೆದ್ದಾರಿಯನ್ನು ಉದ್ಘಾಟನೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಂದರೆ ಅನಿಷ್ಟ ಪಕ್ಷ: ಮೈಸೂರು ಭಾಗದಲ್ಲಿ ಸೂಪರ್ ಫಾಸ್ಟ್ ರೈಲು, ಹೆದ್ದಾರಿಯನ್ನು ಮಾಡಿಸಿದ್ದು ನಮ್ಮ ಡಬ್ಬಲ್ ಇಂಜಿನ್ ಸರ್ಕಾರ. ಸಿದ್ದರಾಮಯ್ಯ ಅವರೇ ಬಂದು ಇಲ್ಲಿ ನೋಡಿ. ಕಾಂಗ್ರೆಸ್ ಅಂದರೆ ಅನಿಷ್ಟ ಪಕ್ಷ, ದರಿದ್ರ ಸರ್ಕಾರ. ಭಾಗ್ಯಗಳ ಹೆಸರಲ್ಲಿ ದೌರ್ಭಾಗ್ಯ ಕೊಟ್ಟವರು ಸಿದ್ದರಾಮಯ್ಯ. ಅನ್ನಭಾಗ್ಯದಲ್ಲಿ ಕನ್ನ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಸರ್ಕಾರಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ತಾಂಡವ ಆಡುತ್ತಿತ್ತು ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ತಾಯಿ ಅಂತ್ಯಕ್ರಿಯೆ ನಂತರ ಕರ್ತವ್ಯಕ್ಕೆ ಹಾಜರಾದ ಮೋದಿ: ಕೋಲ್ಕತ್ತಾ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ