ಕರ್ನಾಟಕ

karnataka

By ETV Bharat Karnataka Team

Published : Sep 15, 2023, 9:12 AM IST

Updated : Sep 15, 2023, 2:52 PM IST

ETV Bharat / state

ದಲಿತರ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಂತಿ ಬೇಲಿ ಹಾಕಿದ ಆರೋಪ: ಡಿಸಿಗೆ ಮನವಿ

ದಲಿತರ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಂತಿ ಬೇಲಿ ಹಾಕಿರುವ ಆರೋಪ ಕೇಳಿ ಬಂದಿದ್ದು, ಸಮಸ್ಯೆ ಬಗೆಹರಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

dalit colony
ತಂತಿ ಬೇಲಿ

ಮಂಡ್ಯ ಡಿಸಿಗೆ ಮನವಿ ಸಲ್ಲಿಸಿದ ಹೂತಗೆರೆ ಗ್ರಾಮಸ್ಥರು

ಮಂಡ್ಯ : ಮದ್ದೂರು ತಾಲೂಕಿನ ಹೂತಗೆರೆ ಗ್ರಾಮದಲ್ಲಿ ಸವರ್ಣೀಯರು ರಸ್ತೆಗೆ ತಂತಿ ಬೇಲಿ ಅಳವಡಿಸಿ ಓಡಾಟಕ್ಕೆ ಅಡ್ಡಿಪಡಿಸಿದ್ದು, ಪರಿಶಿಷ್ಟ ಕಾಲೋನಿಗೆ ಸಂಚರಿಸಲು ರಸ್ತೆ ಬಿಡಿಸಿ ಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ನಗರದ ಡಿಸಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪರಿಶಿಷ್ಟ ಜಾತಿಯವರು ರಸ್ತೆ ಸಂಪರ್ಕವಿಲ್ಲದೆ ಓಡಾಡಲು ಸಾಧ್ಯವಾಗುತ್ತಿಲ್ಲ, ಮೂಲಸೌಕರ್ಯವಿಲ್ಲದೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಬಳಿಕ, ತಂತಿ ಬೇಲಿ ಹಾಕಿದ್ದನ್ನು ಪ್ರಶ್ನಿಸಲು ಹೋದಾಗ ದಲಿತರ ಮೇಲೆ ಗ್ರಾಮದ ವ್ಯಕ್ತಿಯೊಬ್ಬರು ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ. ಜಾತಿ ನಿಂದನೆ ಪದಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸದರಿ ಜಾಗ ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದು, ಕಾಂಕ್ರೀಟ್ ರಸ್ತೆ, ನೀರು, ಚರಂಡಿ ಸೌಲಭ್ಯ ಒದಗಿಸಲಾಗಿದೆ. ಗ್ರಾಮ ಪಂಚಾಯತ್​ ವತಿಯಿಂದ ಮನೆಗಳಿಗೆ ವಾರ್ಷಿಕವಾರು ತೆರಿಗೆ, ಕಂದಾಯ ಹಾಗೂ ಸರ್ಕಾರಿ ಕರಗಳನ್ನು ವಿಧಿಸಲಾಗುತ್ತಿದೆ. ಹಾಗಾಗಿ, ನಮಗೆ ಕೂಡಲೇ ರಸ್ತೆ ಸಂಪರ್ಕವನ್ನು ಕಲ್ಪಿಸಿ ಶಾಶ್ವತ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಸರ್ವೇ ನಂಬರ್​ 366ರಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಗೆ ಗ್ರಾಮದ ನಕಾಶೆಯಲ್ಲಿ 19.5 ಅಡಿ ರಸ್ತೆ ಇದ್ದು, ರಸ್ತೆ ಮಧ್ಯೆ ತಂತಿ ಬೇಲಿ ಹಾಕಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನ ತೆರವುಗೊಳಿಸಿ ನ್ಯಾಯ ಕೊಡಿಸುವಂತೆ ಗ್ರಾಮಸ್ಥರು ಡಿಸಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ :Tamil Nadu students : ದಲಿತ ಮಹಿಳೆ ತಯಾರಿಸಿದ ಉಪಹಾರ ತಿನ್ನಲು ನಿರಾಕರಿಸಿದ ವಿದ್ಯಾರ್ಥಿಗಳು

ದಲಿತ ಮಹಿಳೆ ತಯಾರಿಸಿದ ಉಪಹಾರ ತಿನ್ನಲು ನಿರಾಕರಣೆ : ಬೆಳಗಿನ ಉಪಹಾರ ಯೋಜನೆಯಡಿ ನೀಡಲಾಗುವ ಆಹಾರವನ್ನು ದಲಿತ ಮಹಿಳೆಯೊಬ್ಬರು ತಯಾರಿಸಿದ್ದಾರೆ ಎಂಬ ಕಾರಣಕ್ಕೆ ಕೆಲ ಶಾಲಾ ವಿದ್ಯಾರ್ಥಿಗಳು ತಿಂಡಿ ತಿನ್ನಲು ನಿರಾಕರಿಸಿದ ಘಟನೆ ತಮಿಳುನಾಡಿನ ಕರೂರ್ ಜಿಲ್ಲೆಯ ಶಾಲೆಯೊಂದರಲ್ಲಿ ಇತ್ತೀಚೆಗೆ ನಡೆದಿತ್ತು.

ದಲಿತ ಮಹಿಳೆ ಅಡುಗೆ ಮಾಡಿದ್ದಾರೆ. ಹಾಗಾಗಿ, ನಾವು ಆ ಉಪಹಾರ ಸೇವಿಸುವುದಿಲ್ಲ ಎಂದು ಶಾಲೆಯ 15 ವಿದ್ಯಾರ್ಥಿಗಳು ಉಚಿತ ಉಪಹಾರ ಯೋಜನೆಯ ಪ್ರಯೋಜನ ಪಡೆಯಲು ನಿರಾಕರಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಶಾಲೆಗೆ ಜಿಲ್ಲಾಧಿಕಾರಿ ಟಿ ಪ್ರಭು ಶಂಕರ್ ಎಂಬುವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ, ಈ ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದರು. ಯೋಜನಾ ನಿರ್ದೇಶಕ ಶ್ರೀನಿವಾಸನ್ ಕೂಡ ಪೋಷಕರ ಬಳಿ ಮಕ್ಕಳಿಗೆ ಆಹಾರವನ್ನು ಸೇವಿಸಲು ಹೇಳುವಂತೆ ಮನವಿ ಮಾಡಿದ್ದರು.

Last Updated : Sep 15, 2023, 2:52 PM IST

ABOUT THE AUTHOR

...view details