ಮಂಡ್ಯ: ನಂಜನಗೂಡು ಮೂಲದ ಯುವತಿಯೊಬ್ಬರು ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ತಾಲೂಕಿನ ಬೂದನೂರು ಗ್ರಾಮದಲ್ಲಿ ಜರುಗಿದೆ. ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಚಾಂದಿನಿ (22) ಮೃತ ಮಹಿಳೆ. ಬೂದನೂರು ಗ್ರಾಮದ ಬೆಂ - ಮೈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆ ಬಳಿಗೆ ನಿನ್ನೆ ಮಧ್ಯಾಹ್ನ ಯುವಕನೊಬ್ಬನೊಂದಿಗೆ ಬೈಕ್'ನಲ್ಲಿ ಬಂದ ಯುವತಿ ಕೆಲಕಾಲ ಕೆರೆಯ ಸ್ನಾನಘಟ್ಟದ ಬಳಿ ಮಾತುಕತೆಯಲ್ಲಿ ತೊಡಗಿದ್ದರು.
ಕೆಲ ಹೊತ್ತಿನ ಬಳಿಕ ಯುವಕ ಅಲ್ಲಿಂದ ತೆರಳಿದ್ದು ಯುವತಿ ತನ್ನ ಬ್ಯಾಗ್, ಚಪ್ಪಲಿ ಮುಂತಾದ ವಸ್ತುಗಳನ್ನು ಕೆರೆಯ ದಡದ ಮೇಲಿರಿಸಿ ಕೆರೆಗೆ ಹಾರಿದ್ದಾರೆ. ಸಂಜೆ ಕೆರೆ ದಡದಲ್ಲಿದ್ದ ಬ್ಯಾಗ್ ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶನಿವಾರ ರಾತ್ರಿ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಬೆಳಗ್ಗೆ ನೀರಿನಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿ ಮಂಡ್ಯ ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಸದ್ಯ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿರತೆ ಪ್ರತ್ಯಕ್ಷ ಮೈಸೂರು: ಟಿ.ನರಸೀಪುರ ತಾಲೂಕಿನ ಪ್ರಸಿದ್ಧ ವಡ್ಗಲ್ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಅದರ ದೃಶ್ಯ ದೇವಾಲಯದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಚಿರತೆ ಪ್ರತ್ಯಕ್ಷ ವಿಷಯದಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.