ಮಂಡ್ಯ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಕಿಕ್ಕೇರಿ ಗ್ರಾಮದ ಯೋಧ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಪ್ರಕಾಶ್ ಮತ್ತು ಭಾರತೀ ಪ್ರಕಾಶ್ ದಂಪತಿಗಳ ಪುತ್ರರಾಗಿರುವ ಜನಾರ್ದನ್ ಗೌಡ(30) ಮೃತ ಯೋಧರಾಗಿದ್ದಾರೆ. ಇವರು 2014ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಜಮ್ಮು- ಕಾಶ್ಮೀರದ ಭಾರತ - ಪಾಕಿಸ್ತಾನ ಗಡಿಯಲ್ಲಿ ಕಳೆದ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. 2019ರಲ್ಲಿ ಜನಾರ್ದನ್ ಗೌಡರಿಗೆ ರಂಜಿತಾ ಎಂಬುವವರ ಜೊತೆ ವಿವಾಹವಾಗಿದ್ದು ದಂಪತಿಗೆ ಎರಡು ವರ್ಷದ ಹೆಣ್ಣು ಮಗು ಇದೆ.
ಕಳೆದ ಹಲವು ದಿನಗಳಿಂದ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಜನಾರ್ದನ ಗೌಡ ಅವರಿಗೆ ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಂಡಿಗಡದ ಕಮಾಂಡರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಮೃತ ಯೋಧನ ಪೋಷಕರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾರೆ.
ಮೃತ ದೇಹವನ್ನು ಸೇನೆಯ ವಿಶೇಷ ವಿಮಾನದ ಮೂಲಕ ಶನಿವಾರ ಬೆಳಗ್ಗೆ 8ಗಂಟೆಗೆ ಚಂಡೀಗಢದಿಂದ ಬೆಂಗಳೂರಿಗೆ ಏರ್ಲಿಪ್ಟ್ ಮಾಡಲಾಗಿದೆ. ಬೆಂಗಳೂರಿನಿಂದ 11ಗಂಟೆಗೆ ಸೇನಾ ಆ್ಯಂಬುಲೆನ್ಸ್ ಮೂಲಕ ಹೊರಟು ಮಧ್ಯಾಹ್ನ ಸುಮಾರು 2.30ರಿಂದ 3ಗಂಟೆಯ ವೇಳೆಗೆ ಕಿಕ್ಕೇರಿಗೆ ಯೋಧನ ಮೃತ ದೇಹವನ್ನು ತರಲಾಗುತ್ತದೆ. ಕಿಕ್ಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಕುಟುಂಬಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಮೃತ ದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.