ಮಂಡ್ಯ:ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಬಳಿಯ ಹೇಮಾವತಿ ನದಿಯಲ್ಲಿ ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ಪರಿಣಾಮ ಕುರಿ ಮೇಯಿಸಲು ನದಿ ಮಧ್ಯೆದ ದ್ವೀಪಕ್ಕೆ ತೆರಳಿದ್ದ 10 ಮಂದಿ ಕುರಿಗಾಯಿಗಳ ಸಹಿತ 900 ಕುರಿಗಳನ್ನು ಜಲದಿಗ್ಬಂಧನದಿಂದ ರಕ್ಷಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಕುರಿಗಾಹಿಗಳ ರಕ್ಷಿಸಲು ಅಧಿಕಾರಿಗಳ ಹೋರಾಟ ವಿಶಾಲವಾದ ಈ ದ್ವೀಪದಲ್ಲಿ ಕುರಿಗಳಿಗೆ ಮೇವು ಜಾಸ್ತಿ ಇರುವುದರಿಂದ ಪ್ರತಿ ವರ್ಷ ಅಲ್ಲಿಗೆ ಹೋಗಿ 10 ರಿಂದ 15 ದಿವಸ ಕುರಿಗಳನ್ನು ಮೇಯಿಸಿಕೊಂಡು ವಾಪಸ್ ಹೋಗುವುದು ವಾಡಿಕೆಯಾಗಿತ್ತು. ಅದರಂತೆ ಕಳೆದ 15ಗಳ ಹಿಂದೆ ದ್ವೀಪಕ್ಕೆ ಕುರಿಗಳನ್ನು ಮೇಯಿಸಲು ಹೋಗಿದ್ದರು. ಆದರೆ, ನಿನ್ನೆ ರಾತ್ರಿ ವೇಳೆ ಹೇಮಾವತಿ ನದಿಯಲ್ಲಿ ನೀರು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ಕುರಿಗಾಯಿಗಳಾಗಲಿ, ಕುರಿಗಳಾಗಲಿ ದ್ವೀಪದಂತ ಸ್ಥಳದಿಂದ ಹೊರಗೆ ಬರಲು ಸಾಧ್ಯವಾಗಿಲಿಲ್ಲ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕರೆಬಲಾಯ್ಯನಹಟ್ಟಿಯ ನಿವಾಸಿ ತಿಮ್ಮಯ್ಯ, ಚಿತ್ರದೇವರಹಟ್ಟಿ ಗಂಗಣ್ಣ ಅವರ 2 ಕುಟುಂಬದ 10 ಮಂದಿ ಸದಸ್ಯರು ನೀರಿನ ಮಧ್ಯೆ ಸಿಲುಕಿಕೊಂಡು ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿದಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳುವಿನಿಂದ 1 ಕಿ.ಮೀ. ದೂರದ 300 ಎಕರೆ ವಿಸ್ತೀರ್ಣದ ಈ ದ್ವೀಪದ ಮಧ್ಯೆ ಸಿಲುಕಿರುವ ಕುರಿಗಾಯಿಗಳನ್ನು ಅಧಿಕಾರಿಗಳು ಆ ಸ್ಥಳದಿಂದ ಹೊರ ಬರುವಂತೆ ಮನವೊಲಿಸಿದರು ಸಹ ಪ್ರಯೋಜನವಾಗಿಲ್ಲ. ಕುರಿಗಳನ್ನು ಬಿಟ್ಟು ನಾವು ಹೊರಗೆ ಬರುವುದಿಲ್ಲ ಎಂದು ಕುರುಗಾಹಿಗಳು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ನದಿಯ ನೀರು ಜಾಸ್ತಿಯಾಗಿ ಅಪಾಯದ ಮಟ್ಟವನ್ನು ತಲುಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ವಿಷಯ ತಿಳಿದ ಕೂಡಲೇ ತಹಸೀಲ್ದಾರ್ ಎಂ.ವಿ.ರೂಪಾ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕುರಿಗಾಯಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ.
ಓದಿ:ನೀರಿನಲ್ಲಿ ಕೊಚ್ಚಿ ಹೋಗಿ ಮರವೇರಿದ್ದ ಕೃಷಿ ಅಧಿಕಾರಿಯ ರಕ್ಷಿಸಿದ ಗ್ರಾಮಸ್ಥರು