ಕರ್ನಾಟಕ

karnataka

ETV Bharat / state

ಸಚಿವ ನಾಗೇಂದ್ರ ವಿರುದ್ಧ ಸಿಎಂ ಶಿಫಾರಸು ಮಾಡಿದ ಪ್ರಕರಣ ಏಕೆ ಹಿಂಪಡೆಯಬಾರದು?: ಶಾಸಕ ಜಿ. ಜನಾರ್ದನ ರೆಡ್ಡಿ - ​ ETV Bharat Karnataka

ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಪ್ರಕರಣ ಹಿಂಪಡೆಯುವುದಾದರೆ, ನಾಗೇಂದ್ರ ಅವರ ಪ್ರಕರಣಗಳನ್ನು ಏಕೆ ಹಿಂಪಡೆಯಬಾರದು? ಎಂದು ಶಾಸಕ ಜಿ. ಜನಾರ್ದರೆಡ್ಡಿ ಪ್ರಶ್ನಿಸಿದ್ದಾರೆ.

MLA G. Janardhana Reddy
ಶಾಸಕ ಜಿ. ಜನಾರ್ದನ ರೆಡ್ಡಿ

By ETV Bharat Karnataka Team

Published : Nov 27, 2023, 6:52 PM IST

Updated : Nov 27, 2023, 8:05 PM IST

ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿಕೆ

ಗಂಗಾವತಿ (ಕೊಪ್ಪಳ): ಕ್ಯಾಬಿನೆಟ್​ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಮೇಲೆ ಇದ್ದ ಸಿಬಿಐ ಪ್ರಕರಣಗಳನ್ನು ಹಿಂಪಡಿದಿರುವ ಸಿಎಂ ಸಿದ್ದರಾಮಮಯ್ಯ ಅವರು, ಸಚಿವ ನಾಗೇಂದ್ರ ವಿರುದ್ಧ ತಾವೇ ದಾಖಲಿಸಿರುವ 20ಕ್ಕೂ ಹೆಚ್ಚು ಪ್ರಕರಣಗಳನ್ನು ಏಕೆ ಹಿಂಪಡೆಯಬಾರದು? ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಸಿಎಂಗೆ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗಂಗಾವತಿ ಶಾಸಕರು, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಡಿ.ಕೆ ಶಿವಕುಮಾರ್​ ಅವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಕ್ಕೆ ದ್ವೇಷದ ರಾಜಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹಾಗಾದರೆ ತಾವು ಮಾಡುತ್ತಿರುವುದು ಏನು? ನನ್ನ ವಿರುದ್ಧ ಗಣಿ ಹಗರಣ ಎಂಬ ಸುಳ್ಳಿನ ಕಂತೆಯ ಕಥೆ ಕಟ್ಟಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿರುವ ಸಿದ್ದರಾಮಯ್ಯ, ಅವತ್ತು ನಮ್ಮ ವಿರುದ್ಧದ ಕೇಸ್​ಗಳನ್ನು ತನಿಖೆ ಮಾಡಲು ಸಿಬಿಐಗೆ ಶಿಫಾರಸು ಮಾಡಿರುವುದು ದ್ವೇಷದ ರಾಜಕಾರಣ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದಿದ್ದಾರೆ.

ಜೊತೆಯಲ್ಲಿ ಇದೇ ಗಣಿ ಹಗರಣದಲ್ಲಿ ಸಿದ್ದರಾಮಯ್ಯ ಶಿಫಾರಸು ಮಾಡಿರುವ ನನ್ನ ಮೇಲಿನ 5 ಕೇಸ್​ಗಳು​ ಮತ್ತು ಸಚಿವ ನಾಗೇಂದ್ರ ಮೇಲೆ ಬಿಳಿಕೆರೆ ಪ್ರಕರಣಗಳು, ಎಸ್​ಐಟಿ ಪ್ರಕರಣಗಳು ಸೇರಿ ಒಟ್ಟು 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆ ಆಗಿವೆ. ಇವತ್ತು ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎನ್ನುತ್ತಿದ್ದೀರಿ. ಹಾಗಾದರೆ ಚಾರ್ಜ್​ಶೀಟ್​ನಲ್ಲಿರುವ ನಾಗೇಂದ್ರ ಅವರು ತಪ್ಪಿತಸ್ಥರೇ ಆಗಿದ್ದರೆ ಸಂಪುಟದಿಂದ ಯಾಕೆ ಕೈ ಬಿಟ್ಟಿಲ್ಲ. ಅಥವಾ ದ್ವೇಷ ಇಲ್ಲ ಎನ್ನುವುದಾರೆ ಚಾರ್ಜ್​ಶೀಟ್​ ಸಲ್ಲಿಕೆ ಆಗಿರುವ ಪ್ರಕರಣಗಳನ್ನು ಹಿಂಪಡಿಯಬೇಕಿತ್ತು. ಆದರೆ, ಡಿ.ಕೆ. ಶಿವಕುಮಾರ ವಿಚಾರದಲ್ಲಿ ಒಂದು ನ್ಯಾಯ, ಸಚಿವ ನಾಗೇಂದ್ರ ವಿಚಾರದಲ್ಲಿ ಒಂದು ನ್ಯಾಯವೇ. ಇದು ಯಾವ ರೀತಿ? ನ್ಯಾಯ ಎಂದು ಜನಾರ್ದನ ರೆಡ್ಡಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ಸ್ವತಂತ್ರ ಸ್ಪರ್ಧೆ:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕ ಬಳಿಕ ಬಿ.ವೈ ವಿಜಯೇಂದ್ರ ನನಗೆ ಕರೆ ಮಾಡಿ ಮಾತನಾಡಿರುವುದು ನಿಜ. ಅದೊಂದು ಖಾಸಗಿ ಸೌಹಾರ್ದಯುತ ಕರೆಯಾಗಿತ್ತು. ಈ ಹಿಂದೆ ಅವರ ತಂದೆ ಬಿ.ಎಸ್​ ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ನಾನು ವಹಿಸಿದ್ದ ನಿರ್ಣಾಯಕ ಪಾತ್ರವನ್ನು ವಿಜಯೇಂದ್ರ ನೆನಪಿಸಿಕೊಂಡರು. ಅಲ್ಲದೇ ಸಂಘಟನೆಯ ವಿಚಾರದಲ್ಲಿ ನನ್ನ ತಂದೆಗೆ ಸಾಥ್ ನೀಡಿದಂತೆ ತಮಗೂ ಬೆಂಬಲ ನೀಡಿ ಎಂದು ಕೋರಿದರು. ಆದರೆ, ಪಕ್ಷಕ್ಕೆ ನನ್ನನ್ನು ಆಹ್ವಾನಿಸುವ ಯಾವ ಮಾತುಕತೆಯೂ ನಡೆದಿಲ್ಲ. ಈಗಾಗಲೆ ನಾನು ಸ್ವತಂತ್ರ ಪಕ್ಷ ಸ್ಥಾಪಿಸಿ ಬಹು ದೂರಕ್ಕೆ ಹೋಗಿದ್ದರಿಂದ ಅದರ ನಿರೀಕ್ಷೆ ನನಗಿಲ್ಲ ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ :ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಐವರು ಆತ್ಮಹತ್ಯೆ: ಗೃಹ ಸಚಿವ ಜಿ ಪರಮೇಶ್ವರ್​

Last Updated : Nov 27, 2023, 8:05 PM IST

ABOUT THE AUTHOR

...view details