ಕೊಪ್ಪಳ :ತುಂಗಭದ್ರಾ ಜಲಾಶಯ ಲಕ್ಷಾಂತರ ರೈತರ ಜೀವನಾಡಿ. ಜಿಲ್ಲೆಯಲ್ಲಿ ಹಾದು ಹೋಗುವ ಈ ನದಿ ರಮಣೀಯ ದೃಶ್ಯ ಸೃಷ್ಟಿಸುತ್ತದೆ. ಅದರಲ್ಲಿಯೂ ನದಿಯಲ್ಲಿ ನೀರಿದ್ದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಸಾಣಾಪುರ ಪರಿಸರದಲ್ಲಿ ಸೃಷ್ಟಿಯಾಗುವ ಕಿರು ಜಲಪಾತಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ಇವು 'ಹಂಪಿ ಜಲಪಾತ'ಗಳೆಂದೇ ದಾಖಲಾಗಿವೆ. ಆದರೆ, ಪ್ರವಾಸಕ್ಕೆ ಬಂದವರು ಈ ಕಿರು ಜಲಪಾತಗಳನ್ನು ಹುಡುಕಲು ಪ್ರಯಾಸ ಪಡುವಂತಾಗಿದೆ.
ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು, ಕೊಪ್ಪಳ ಜಿಲ್ಲೆಯ ಅಂಜನಾದ್ರಿ, ವಿಜಯನಗರ ಅರಸರ ಮೊದಲ ರಾಜಧಾನಿ ಆನೆಗೊಂದಿ ಹಾಗೂ ಇದೇ ಪ್ರದೇಶದಲ್ಲಿ ತುಂಗಭದ್ರಾ ನದಿಯಿಂದ ಸೃಷ್ಟಿಯಾಗುವ ಆಕರ್ಷಕ ಕಿರುಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿಗೆ ದೇಶ ಹಾಗೂ ವಿದೇಶಿಗಳಿಂದ ಪ್ರವಾಸಿಗರು ಬರುತ್ತಾರೆ.
ಆದರೆ, ಹಂಪಿಗೆ ಬಂದವರು ಈ ಜಲಪಾತಗಳು ಎಲ್ಲಿವೆ ಎಂದು ಹುಡಕಬೇಕಾಗಿದೆ. ಮ್ಯಾಪ್ ನೋಡಿಕೊಂಡು ಬರುವ ಪ್ರವಾಸಿಗರಿಗೆ ಈ ಫಾಲ್ಸ್ಗಳು ಎಲ್ಲಿವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕಾರಣ ಇಲ್ಲಿಗೆ ಬರಲು ಸರಿಯಾದ ರಸ್ತೆ ಹಾಗೂ ಪ್ರವಾಸಿಗರಿಗೆ ಮೂಲಸೌಲಭ್ಯಗಳಿಲ್ಲ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗುತ್ತವೆ.
ಜಲಪಾತಗಳ ನಯನ ಮನೋಹರ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ವೀಕೆಂಡ್ ಬೆಸ್ಟ್ ಸ್ಪಾಟ್ ಆಗಿರುವ ಆನೆಗೊಂದಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ತುಂಗಭದ್ರಾ ನದಿಯ ನೀರು ಹರಿಯುವಾಗ ಕಲ್ಲು ಬಂಡೆಗಳ ಮಧ್ಯೆ ಹಾಯ್ದು ಹೋಗುವಾಗ ಜಲಧಾರೆ ಧುಮ್ಮುಕ್ಕುತ್ತಿವೆ.