ಕರ್ನಾಟಕ

karnataka

ETV Bharat / state

ಸೋಂಕಿತನ ಶವ ಹೂಳಲು ವಿರೋಧ: ಸರ್ಕಾರಿ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಿದ ಅಧಿಕಾರಿಗಳು

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಗ್ರಾಮದ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೊನೆಗೆ ಅಧಿಕಾರಿಗಳು ಮಧ್ಯರಾತ್ರಿ ಮೂರು ಗಂಟೆಗೆ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆಯಿತು.

ಸೋಂಕಿತನ ಶವ ಸಂಸ್ಕಾರಕ್ಕೆ ಸ್ವಗ್ರಾಮದಲ್ಲೆ ವಿರೋಧ
ಸೋಂಕಿತನ ಶವ ಸಂಸ್ಕಾರಕ್ಕೆ ಸ್ವಗ್ರಾಮದಲ್ಲೆ ವಿರೋಧ

By

Published : Jul 10, 2020, 8:57 AM IST

Updated : Jul 10, 2020, 2:27 PM IST

ಗಂಗಾವತಿ:ಕೊರೊನಾ ಸೋಂಕಿನಿಂದ‌ ಮೃತಪಟ್ಟಿದ್ದ ಇಲ್ಲಿನ ಹಿರೇಜಂತಕಲ್ ನಿವಾಸಿಯ ಅಂತ್ಯ ಸಂಸ್ಕಾರಕ್ಕೆ ಸ್ಥಳಿಯರು ವಿರೋಧಿಸಿದ ಹಿನ್ನೆಲೆ ಮೃತ ದೇಹವನ್ನು ಸಂಗಾಪುರ ಗ್ರಾಮಕ್ಕೆ ಸಾಗಿಸಲಾಯಿತು. ಆದರೆ ಅಲ್ಲೂ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಮಧ್ಯರಾತ್ರಿ ನಡೆಯಿತು.

ಒಂದು ಕಡೆ ಇಡೀ ಸಮುದಾಯದ ವಿರೋಧ ಮತ್ತೊಂದು ಕಡೆ ಶವ ಪಡೆಯಲು ಮುಂದಾಗದ ಕುಟುಂಬಿಕರ ವೈಖರಿಗೆ ಬೇಸತ್ತು ಹೋದ ವಿವಿಧ ಇಲಾಖೆಯ ಅಧಿಕಾರಿಗಳು ಸಂಜೆ ಐದು ಗಂಟೆಯಿಂದ ಮಧ್ಯರಾತ್ರಿ ಮೂರು ಗಂಟೆವರೆಗೆ ಸತತ ಹತ್ತು ಗಂಟೆಗಳ ಕಾಲ ಶವವನ್ನು ಜೊತೆಗೆ ಇಟ್ಟುಕೊಂಡು ಪರದಾಡಿದರು.

ಸಾರ್ವಜನಿಕರಿಗೆ ಎಷ್ಟೇ ತಿಳಿ ಹೇಳಲು ಯತ್ನಿಸಿದರೂ ಜನ ಮಾತ್ರ ಅಧಿಕಾರಿಗಳ ಸಮಜಾಯಿಷಿಗೆ ಒಪ್ಪಲಿಲ್ಲ. ಇದರಿಂದ ವಿಚಲಿತರಾದ ಅಧಿಕಾರಿಗಳು ಮೃತ ದೇಹವನ್ನು ನಿಗೂಢ ಸ್ಥಳಕ್ಕೆ ಸ್ಥಳಾಂತರಿಸಿ ಮಧ್ಯರಾತ್ರಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆಯಿತು.

ಸೋಂಕಿತನ ಶವ ಸಂಸ್ಕಾರಕ್ಕೆ ಸ್ವಗ್ರಾಮದಲ್ಲೇ ವಿರೋಧ

ಮೃತ ವ್ಯಕ್ತಿ ಮೂಲತಃ ಸಂಗಾಪುರ ಗ್ರಾಮಕ್ಕೆ ಸೇರಿದ್ದು, ಅಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುವ ಉದ್ದೇಶಕ್ಕೆ ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜೆಸಿಬಿಯಿಂದ ಶವ ಹೂಳಲು ಗುಂಡಿ ತೋಡಿಸಿದ್ದರು. ಆದರೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಯಿತು.

ಕೊನೆಗೆ ಸಂಗಾಪುರದ ಕಣಿವೆ ಆಂಜನೇಯ ದೇಗುಲದ ಸಮೀಪ ಇರುವ ಸರ್ವೆ ನಂಬರ್ 28ರಲ್ಲಿ ಇರುವ ಸರ್ಕಾರದ ಅರಣ್ಯ ಇಲಾಖೆಯ ಭೂಮಿಯಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಮಧ್ಯರಾತ್ರಿ ಮೂರು ಗಂಟೆಗೆ ಶವ ಸಂಸ್ಕಾರ ನೆರವೇರಿಸಿದರು ಎಂದು ತಿಳಿದು ಬಂದಿದೆ.

ಹೀಗಾಗಿ ಇಡೀ ರಾತ್ರಿ ನಿದ್ರೆಯಿಲ್ಲದೇ ಕಳೆದ ಅಧಿಕಾರಿಗಳು, ಜಾಗರಣೆ ಮಾಡಿದರು. ಕೊರೊನಾ ಎಂಬ ಸೋಂಕು ಸಮುದಾಯದಲ್ಲಿ ವಿಚಿತ್ರ ಸನ್ನಿವೇಶಗಳಿಗೆ ಕಾರಣವಾಗುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

Last Updated : Jul 10, 2020, 2:27 PM IST

ABOUT THE AUTHOR

...view details