ಗಂಗಾವತಿ:ರಾಜ್ಯದಲ್ಲಿ ಮೊದಲ ಬಾರಿಗೆ ತಾಲೂಕು ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಉಚಿತ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ವಯೋಸಹಜ ಹಾಗೂ ಅತಿಯಾದ ಮೊಣಕಾಲಿನ ಮೇಲಿನ ಒತ್ತಡದಿಂದಾಗಿ ಸವೆಯುವ ಮೊಣಕಾಲು ಚಿಪ್ಪಿನ ಬದಲಾವಣೆ (ಟೋಟಲ್ ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಡಿ ಹೊಸಪೇಟೆ ತಾಲೂಕಿನ ಗ್ರಾಮೀಣ ಭಾಗದ ಶಾರದಮ್ಮ ಹಾಗೂ ಗಂಗಾವತಿಯ ಸಿದ್ದಪ್ಪ ಪೂಜಾರಿ ಎಂಬ ಇಬ್ಬರು ಹಿರಿಯರಿಗೆ ಈ ಚಿಕಿತ್ಸೆ ನೆರವೇರಿಸಲಾಗಿದೆ.
ಪೂರ್ಣ ಪ್ರಮಾಣದ ಉಚಿತ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುವ ಮೊದಲು ರೋಗಿಯು ಮೊಣಕಾಲು ಚಿಪ್ಪಿನ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಯ ನಂತರ ಯಾವುದೇ ತೊಂದರೆ ಇಲ್ಲದೇ ಸಾಮಾನ್ಯರಂತೆ ಓಡಾಡುತ್ತಿದ್ದಾರೆ. ಇದೇ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿದರೆ 2.5 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಹಾಗೂ ಪ್ರತಿ ತಾಲೂಕು ಹಂತದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗಳಲ್ಲಿ ಮಾಡ್ಯುಲರ್ ಶಸ್ತ್ರಚಿಕಿತ್ಸಾ ಘಟಕ (ಮಾಡ್ಯುಲರ್ ಒಟಿ) ಗಳನ್ನು ಸ್ಥಾಪಿಸಲಾಗಿದೆ. ಅದರಂತೆ ನಮ್ಮಲ್ಲೂ ಇರುವ ಮಾಡ್ಯುಲರ್ ಒಟಿಯಲ್ಲಿ ಟೋಟಲ್ ನೀ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ತಾಲೂಕು ಹಂತದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ ಕೀರ್ತಿ ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯ ಸಲಾವುದ್ದೀನ್.
ಈಗಾಗಲೇ ಹತ್ತಾರು ಅಧುನಿಕ ವೈದ್ಯ ಸೌಲಭ್ಯಗಳಿಂದಾಗಿ ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲೂಕು ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಈ ಆಸ್ಪತ್ರೆಗಿದೆ. ಇದೀಗ ಅತ್ಯುತ್ತಮ ಸೇವೆ ಮೂಲಕ ಮತ್ತೊಂದು ಮೈಲಿಗಲ್ಲು ದಾಖಲಿಸುವ ಮೂಲಕ ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ಮಾದಾರಿಯಾಗಿದೆ.