ಕುಷ್ಟಗಿ (ಕೊಪ್ಪಳ): ತಾಲೂಕಿನ ಹನುಮನಾಳಕ್ಕೆ ಬಂದು ಹೋಗಿದ್ದ ಕೊರೊನಾ ಸೋಂಕಿತರ ಸಿಡಿಆರ್ ಹಾಗೂ ಟ್ರಾವೆಲಿಂಗ್ ಹಿಸ್ಟರಿಯನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಈ ಬೆನ್ನಲ್ಲೆ ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶದ ಅನ್ವಯ ಶುಕ್ರವಾರ ತಹಶೀಲ್ದಾರ್ ಎಂ.ಸಿದ್ದೇಶ ಹನುಮನಾಳ ಗ್ರಾ.ಪಂ.ಯಲ್ಲಿ ತುರ್ತು ಸಭೆ ನಡೆಸಿದರು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಢಾಣಕ ಶಿರೂರು ಗ್ರಾಮದ ಸೋಂಕಿತರಾದ 681 ಹಾಗೂ 684 ಇವರಿಬ್ಬರು ಕುಷ್ಟಗಿ ತಾಲೂಕಿನ ಹನುಮನಾಳಕ್ಕೆ ಬಂದು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಸ್ವಯಂ ನಿರ್ಬಂಧ ಹಾಕಿಕೊಳ್ಳುವುದಾಗಿ ವಾಗ್ದಾನ ಮಾಡಿದ್ದರು. ನಿತ್ಯ ಬೆಳಗ್ಗೆ 9ರವರೆಗೆ ಅಗತ್ಯ ವಸ್ತುಗಳ ಅಂಗಡಿಗಳ ವ್ಯಾಪಾರ ವಹಿವಾಟಿಗೆ ಕಾಲಾವಕಾಶದ ನಂತರ ಔಷಧ, ಕ್ಲಿನಿಕ್ ಹೊರತು ಪಡಿಸಿ ಸಂಪೂರ್ಣ ಬಂದ್ಗೆ ತಹಸೀಲ್ದಾರ್ ಸಮ್ಮುಖದಲ್ಲಿ ಸಮ್ಮತಿಸಿದರು.
ಇನ್ನು ಗ್ರಾಮಸ್ಥರು ಮನೆಯಲ್ಲಿರಲು ಸೂಚಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ , ಸೋಪು ಬಳಸಿ ಕೈ ತೊಳೆಯುವುದು, ಸಾಮಾಜಿಕ ಅಂತರದ ಮಾಹಿತಿಯನ್ನು ನೀಡಿದರು.