ಕೊಪ್ಪಳ: ಸರ್ಕಾರಿ ಶಾಲೆಯ ಉಳಿವಿಗಾಗಿ ಗ್ರಾಮಸ್ಥರು ಹಾಗು ಶಾಲೆಯ ಹಳೇ ವಿದ್ಯಾರ್ಥಿಗಳು ಪಾದಯಾತ್ರೆ ಆರಂಭಿಸಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಕಾರಟಗಿ ತಹಶೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡರು.
ಚಳ್ಳೂರು ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ದಾನ ನೀಡಲಾಗಿದ್ದ ಭೂಮಿಯಲ್ಲಿ ದಾನಿಗಳ ಕುಟುಂಬದವರು, ಜಾಗ ತಮ್ಮದೆಂದು ವಾಣಿಜ್ಯ ಮಳಿಗೆಗಳನ್ನು ಕಟ್ಟಿಸುತ್ತಿದ್ದಾರೆ. ಶಾಲೆಗೆ ನೀಡಿದ ಜಾಗದಲ್ಲಿ ದಾನಿಗಳ ಕುಟುಂಬಸ್ಥರು ಹಕ್ಕು ಚಲಾಯಿಸುತ್ತಿರುವುದಕ್ಕೆ ಗ್ರಾಮಸ್ಥರು ಈಗಾಗಲೇ ಸಾಕಷ್ಟು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದಾರೆ. ಆದರೂ ಸಹ ಯಾವುದೇ ಪ್ರಯೋಜವಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.