ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಪದ್ಮಶ್ರೀ ಡಾ. ಮಾಲತಿ ಹೊಳ್ಳ ಅವರು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿದ ಕ್ರೀಡಾಪಟು ಡಾ. ಮಾಲತಿ ಹೊಳ್ಳ
ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು.
ರಥಕ್ಕೆ ಚಾಲನೆ ಸಿಗುತ್ತಿದ್ದಂತೆ ಲಕ್ಷಾಂತರ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಜಯಗವಿಸಿದ್ದೇಶ, ಗವಿಸಿದ್ದೇಶ್ವರ ಮಹಾರಾಜ್ ಕಿ ಜೈ ಎಂಬ ಭಕ್ತಿಯ ಘೋಷಣೆಗಳು ಮುಗಿಲುಮುಟ್ಟಿದ್ದವು. ರಥವು ಪಾದಗಟ್ಟೆ ತಲುಪಿ ವಾಪಸ್ ಸ್ವಸ್ಥಾನಕ್ಕೆ ಬರುತ್ತಿದ್ದಂತೆ ಲಕ್ಷಾಂತರ ಭಕ್ತರು ಕರತಾಡನ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಮಹಾರಥೋತ್ಸವದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವರಾದ ಶಿವರಾಜ ತಂಗಡಗಿ, ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಸೇರಿದಂತೆ ವಿವಿಧ ಮಠಾಧೀಶರುಗಳು, ಗಣ್ಯರು ಪಾಲ್ಗೊಂಡಿದ್ದರು.