ಗಂಗಾವತಿ:ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀದೇವಿ ಎಂಬ ಕಾನೂನು ಬಾಹಿರ ಮಟ್ಕಾ ದಂಧೆಯ ಹಿಂದೆ ಪೊಲೀಸ್ ಅಧಿಕಾರಿಯ ಪಾತ್ರವಿದೆ ಎಂಬ ಆರೋಪಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಒದಗಿಸುವಂತೆ ಮಾಜಿ ಸಚಿವ ಶಿವರಾಜ ತಂಗಡಗಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾ ಎಸ್ಪಿ ಟಿ. ಶ್ರೀಧರ್ ಹೇಳಿದ್ದಾರೆ.
ಮಟ್ಕಾ ವ್ಯವಹಾರದ ಹಿಂದೆ ಪೊಲೀಸ್ ಅಧಿಕಾರಿಯ ಪಾತ್ರವಿದೆ ಎಂದು ತಂಗಡಗಿ ಈ ಹಿಂದೆ ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಶ್ರೀಧರ್, ಮಾಜಿ ಸಚಿವರು ದೂರು ನೀಡಿದ ತಕ್ಷಣವೇ ಈ ಬಗ್ಗೆ ಇಲಾಖೆಯಿಂದ ವಿಚಾರಣೆ ನಡೆಸಲಾಗಿದ್ದು, ಅಂಥ ಯಾವುದೇ ಪ್ರಕರಣದ ಹಿಂದೆ ಪೊಲೀಸ್ ಅಧಿಕಾರಿಯ ಪಾತ್ರ ಕಂಡು ಬಂದಿಲ್ಲ ಎಂದರು.
ದೂರು ನೀಡುವ ಸಂದರ್ಭದಲ್ಲಿ ಮಾಜಿ ಸಚಿವರು ನೇರವಾಗಿ ಆರೋಪಿಸಿ ಸಂಬಂಧಿತ ಸೂಕ್ತ ದಾಖಲೆ ಒದಗಿಸಬಹುದಿತ್ತು. ಯಾರೋ ಅಧಿಕಾರಿ ಎಂದು ಮುಚ್ಚಿಡುವ ಅಗತ್ಯವಿರಲಿಲ್ಲ ನಮ್ಮ ಬಳಿ ದಾಖಲೆ ಇದೆ, 15-20 ದಿನ ಬಿಟ್ಟು ಹೊರಕ್ಕೆ ಬಿಡುತ್ತೇವೆ ಎಂನ್ನುವುದು ಸರಿಯಲ್ಲ ಎಂದು ಹೇಳಿದರು.
ನೇರವಾಗಿ ಹೇಳಿದ್ದರೆ ಪೊಲೀಸ್ ಅಧಿಕಾರಿಯ ಪಾತ್ರವಿದ್ದರೆ ನೇರವಾಗಿಯೇ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಜನ ಹಿತ ಕಾಯುವ ಶಿಸ್ತಿನ ಇಲಾಖೆಯ ಮೇಲೆ ಮಾಜಿ ಸಚಿವರು ಮಾಡಿದ ಆರೋಪದಂತೆ ಏನಾದರೂ ಸಾಕ್ಷ್ಯಗಳಿದ್ದರೆ ಹಾಜರುಪಡಿಸುವಂತೆ ನೋಟಿಸ್ ನೀಡಲಾಗುವುದು ಎಂದರು.