ಕೊಪ್ಪಳ: ಬಟ್ಟೆ ಬಣ್ಣವಷ್ಟೇ, ಅದನ್ನು ವಿವಾದ ಮಾಡುವುದು ಬೇಡ. ಕಲರ್ ಸಹಿಸದವರು ಮನುಷ್ಯರ ಮಾನವೀಯತೆಯನ್ನು ಸಹಿಸುತ್ತಾರಾ? ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಬೇಷರಂ ಹಾಡಿನಲ್ಲಿನ ಕೇಸರಿ ಬಟ್ಟೆ ಕುರಿತು ಎದ್ದಿರುವ ವಿವಾದದ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ವಿವಾದ ಹುಟ್ಟುಹಾಕಲು ಬಿಜೆಪಿಯು ಕೆಲವರಿಗೆ ತರಬೇತಿ ಕೊಡುತ್ತಿದೆ. ಈ ತರದ ಟ್ರೈನಿಂಗ್ ಕೊಡುವುದು ದೇಶಕ್ಕೆ ಅಪಾಯಕಾರಿ ಎಂದು ಕಿಡಿಕಾರಿದರು.
ಕಾಂಗ್ರೆಸ್ಗೆ ಮತ್ತೆ ಅಧಿಕಾರ:ಜನಸಾಮಾನ್ಯರು ಆತ್ಮಾವಲೋಕನ ಮಾಡುತ್ತಿದ್ದು, ಸಿದ್ದರಾಮಯ್ಯ ಹಾಗೂ ಬಿಜೆಪಿ ಆಡಳಿತದ ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತದ ಬಗ್ಗೆ ಜನ ಸಾಮಾನ್ಯರು ಬೇಸತ್ತಿದ್ದಾರೆ. 2023ರಲ್ಲಿ ಖಂಡಿತವಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋಮುಗಲಭೆ ಬೇಡ:ಮಂಗಳೂರು ಹಾಗೂ ಶಿವಮೊಗ್ಗವನ್ನು ಸೂಕ್ಷ್ಮ ಪ್ರದೇಶವಾಗಿ ಬಿಂಬಿಸುತ್ತಿದ್ದಾರೆ. ಅಲ್ಲಿಯ ಜನ ಸೌಹಾರ್ದಯುತವಾಗಿದ್ದು, ಬಿಜೆಪಿಯವರು ರಾಜಕಾರಣಕ್ಕಾಗಿ ಅಲ್ಲಿ ಕೋಮು ಗಲಭೆ ಆಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಂಕಿತ ಉಗ್ರ ಶಾರಿಕ್ ಕುರಿತಾಗಿ ಡಿಕೆಶಿ ಹೇಳಿಕೆಗೆ ಪ್ರತ್ರಿಕ್ರಿಯಿಸಿದ ಖಾದರ್, ಶಾರಿಕ್ ವಿಷಯ ಬಗ್ಗೆ ಶಿವಕುಮಾರ್ ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಅವರು ಹೇಳಿದ್ದಾರೆ. ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ. ಭಯೋತ್ಪಾದಕ ಘಟನೆ ಎಲ್ಲಿಯೂ ನಡೆಯಬಾರದು ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಬಣವಿಲ್ಲ:ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ ಎಲ್ಲರೂ ಒಂದಾಗಿದ್ದೇವೆ. ನಮ್ಮ ಹಿರಿಯ ನಾಯಕ ಅಮರೇಗೌಡ ಬಯ್ಯಾಪುರ ಜನ್ಮದಿನಕ್ಕಾಗಿ ಬಂದಿದ್ದೇವೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಅವರು ಬಾದಾಮಿಯಲ್ಲಿ ಮತ್ತೆ ನಿಲ್ಲುವಂತೆ ಅಲ್ಲಿಯ ಜನ ಒತ್ತಾಯಿಸುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದರು.
ಇದನ್ನೂಓದಿ:ಸೈನಿಕರ ಕುಟುಂಬಕ್ಕೆ ಅಗತ್ಯ ಸವಲತ್ತು ಕಲ್ಪಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ