ಕೊಪ್ಪಳ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾದ ಸ್ಥಳಗಳಲ್ಲಿ ಮಾಡಲಾಗುವ ಕಂಟೈನ್ಮೆಂಟ್ ಝೋನ್ ಮತ್ತು ಸೀಲ್ಡೌನ್ ಏರಿಯಾಗಳ ವ್ಯವಸ್ಥೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಜೂನ್ ಆರಂಭದಲ್ಲಿ ಸೋಂಕು ತಗುಲಿದ್ದ ವ್ಯಕ್ತಿ ವಾಸವಾಗಿರುವ ಬಿ.ಟಿ. ಪಾಟೀಲ್ ನಗರದ ಪ್ರದೇಶವೊಂದನ್ನು ಸೀಲ್ಡೌನ್ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್ಗೆ ಕುಳಿತುಕೊಳ್ಳಲು, ಕೆಲಸ ಮಾಡಲು ವ್ಯವಸ್ಥಿತವಾಗಿ ಪೆಂಡಾಲ್ ಹಾಕಲಾಗಿತ್ತು. ಆದರೆ, ಈಗ ನಗರದ ಕುರುಬರ ಓಣೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಾಡಲಾಗಿರುವ ಸೀಲ್ಡೌನ್ ವ್ಯವಸ್ಥೆ ಅತ್ಯಂತ ಕೆಟ್ಟದಾಗಿದೆ ಎಂಬ ಆಪಾದನೆ ಇದೆ.
ಕೊಪ್ಪಳದ ಕಂಟೈನ್ಮೆಂಟ್ ಝೋನ್, ಸೀಲ್ಡೌನ್ ಏರಿಯಾಗಳಲ್ಲಿ ತಾರತಮ್ಯ ಕರ್ತವ್ಯ ನಿರತ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲ. ಕುರುಬರ ಓಣಿಯಲ್ಲಿ ಎರಡು ಕಡೆಯ ದಾರಿಯನ್ನು ಮುಳ್ಳುಬೇಲಿಯಿಂದ ಬಂದ್ ಮಾಡಲಾಗಿದೆ. ಒಂದು ಕಡೆ ಮಾತ್ರ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಅಲ್ಲದೆ ಸಿಬ್ಬಂದಿಯನ್ನು ಹೆಚ್ಚಾಗಿ ನೇಮಿಸಿಲ್ಲ. ಹೀಗಾಗಿ ಕಂಟೈನ್ಮೆಂಟ್ ಪ್ರದೇಶಗಳಿಂದ ಯಾರು ಬೇಕಾದರೂ ಹೊರಗೆ ಓಡಾಡುವಂತಹ ಸ್ಥಿತಿ ಇದೆ. ಕರ್ತವ್ಯ ನಿರತ ಸಿಬ್ಬಂದಿ ಬಿಸಿಲು, ಮಳೆ ಬಂದರೆ ಸಮೀಪದ ಆಟೋಗಳಲ್ಲಿ ಆಶ್ರಯ ಪಡೆಯಬೇಕು. ಇಂತಹ ಸ್ಥಿತಿ ಜಿಲ್ಲೆಯ ಹಲವು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕಂಡು ಬರುತ್ತಿದೆ ಎಂಬುದು ಸ್ಥಳೀಯರ ಆಪಾದನೆ.
ಶ್ರೀಮಂತರು ವಾಸಿಸುವ ಏರಿಯಾಗಳಲ್ಲಿ ಸೀಲ್ಡೌನ್ ಆದಾಗ ಇದ್ದ ವ್ಯವಸ್ಥೆ, ಸಾಮಾನ್ಯರು ವಾಸವಾಗಿರುವ ಪ್ರದೇಶಗಳ ಸೀಲ್ಡೌನ್ ವ್ಯಾಪ್ತಿಯಲ್ಲಿ ಇರಬೇಕು ಎಂಬುದು ಜನರ ಬೇಡಿಕೆ.