ಗಂಗಾವತಿ(ಕೊಪ್ಪಳ): ನಿಷೇಧಿತ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ ಸೇರಿದಂತೆ ನಗರದಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಶೋಧ ನಡೆಸಿದ್ದಾರೆ.
ತಹಶಿಲ್ದಾರ್ ಯು. ನಾಗರಾಜ್ ಮತ್ತು ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಪ್ರಮುಖ ಸಂಘಟನೆಯ ಮೂರಕ್ಕೂ ಹೆಚ್ಚು ಜನರ ಮನೆಯ ಮೇಲೆ ಬೆಳಗ್ಗೆ ಮೂರು ಗಂಟೆವರೆಗೂ ಶೋಧ ಕಾರ್ಯ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ನಿಷೇಧಿತ ಪಿಎಫ್ ಐ ಹಾಗೂ ಸಿಎಫ್ ಐ ಸಂಘಟನೆಯ ಪ್ರಮುಖರಾದ ಚಾಂದ್ ಸಲ್ಮಾನ್, ಸರ್ಫರಾಜ್ ಮತ್ತು ಮೊಹಮ್ಮದ್ ರಸೂಲ್ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರ ಆಧಾರ್, ಮತದಾನದ ಗುರುತಿನ ಪತ್ರದಂತಹ ದಾಖಲೆ ಬಿಟ್ಟರೆ ಬೇರೆ ಏನೂ ಸಿಗದ ಹಿನ್ನೆಲೆ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಅಲ್ಲದೆ ಪಿಎಫ್ ಐ ಸಂಘಟನೆಯ ಕಚೇರಿ ಮೇಲೆ ದಾಳಿ ಮಾಡಿದಾಗ ಕೇವಲ ಒಂದು ಟೇಬಲ್ ಮತ್ತು ಚೇರ್ ಬಿಟ್ಟರೆ ಬೇರೇನೂ ಸಿಕ್ಕಿಲ್ಲ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಕಚೇರಿಗೆ ಲಾಕ್ ಹಾಕದೇ ಪೊಲೀಸರು ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಂಗಳೂರು: ಪಿಎಫ್ಐ ಸೇರಿದಂತೆ 12 ಕಚೇರಿಗಳಿಗೆ ಬೀಗಮುದ್ರೆ