ಕುಷ್ಟಗಿ (ಕೊಪ್ಪಳ): ಪಟ್ಟಣದ ಹೊರವಲಯದ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಪುರಸಭೆ ಪೌರಕಾರ್ಮಿಕರು ರಂಜಾನ್ ಹಬ್ಬದ ರಜೆಯ ಹೊರತಾಗಿಯೂ ಬೆಳ್ಳಂಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸ್ವಚ್ಚತಾ ಕಾರ್ಯಾಚರಣೆಗೆ ಇಳಿದರು.
ಈ ಸಾಂಸ್ಥಿಕ ಕ್ವಾರಂಟೈನ್ನ ಕೊಠಡಿಯೊಂದರಲ್ಲಿ ಕೊರೊನಾ ಪಾಸಿಟಿವ್ ರೋಗಿ ಒಂದೆರೆಡು ದಿನ ಇದ್ದ ಎನ್ನುವ ಕಾರಣಕ್ಕೆ ಈ ಸುರಕ್ಷತಾ ಕ್ರಮ ಅನುಸರಿಸಲಾಯಿತು. ಈ ಕ್ವಾರಂಟೈನ್ನಲ್ಲಿದ್ದ 66 ಜನರನ್ನು ಕಳೆದ ಶನಿವಾರವೇ ಡಿಸ್ಚಾರ್ಜ್ ಮಾಡಿದ್ದರಿಂದ ಭಾನುವಾರ ಕರ್ಫ್ಯೂ ಹೊರತಾಗಿಯೂ ಕ್ರಿಮಿನಾಶಕ ಸಿಂಪರಣೆ ಕ್ರಮದಿಂದ ಇಡೀ ವಸತಿ ಶಾಲೆಯ ಪ್ರತಿ ಕೊಠಡಿ ಬಿಡದೆ ವಸತಿ ಶಾಲೆಯ ಆವರಣವನ್ನು ಶುಚಿಗೊಳಿಸಲಾಗಿತ್ತು.
ಸೋಮವಾರ ರಂಜಾನ್ ಹಬ್ಬದ ರಜೆ ಹೊರತಾಗಿಯೂ ಪೌರಕಾರ್ಮಿಕರಾದ ಯಮನಪ್ಪ ಕಟ್ಟಿಮನಿ, ವೆಂಕಟೇಶ ಪೂಜಾರಿ, ಚಿದಾನಂದ ಕಟ್ಟಿಮನಿ ಪಿಪಿಇ ಕಿಟ್ ಧರಿಸಿ ಸ್ವಚ್ಚತಾ ಕಾರ್ಯ ನಡೆಸಿದರು.
ಪುರಸಭೆ ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಮಾತನಾಡಿ, ಈ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಕೊರೊನಾ ಹಾಟ್ಸ್ಪಾಟ್ ಮಹಾರಾಷ್ಟ್ರ, ತಮಿಳನಾಡು ಇತರೆಡೆಗಳಿಂದ ತಾಲೂಕಿನ ವಲಸೆ ಕಾರ್ಮಿಕರನ್ನು ಮೇ 12ರಿಂದ ಕ್ವಾರಂಟೈನ್ ಮಾಡಲಾಗಿತ್ತು ಎಂದರು.
ಇನ್ನು ಈ ವೇಳೆ ಊಟದ ಪಾರ್ಸಲ್ ಪ್ಲಾಸ್ಟಿಕ್ ತ್ಯಾಜ್ಯ ಅಲ್ಲಲ್ಲಿ ಎಸೆದಿದ್ದರು. ಇದೆನೆಲ್ಲವನ್ನು ನಮ್ಮ ಪೌರ ಕಾರ್ಮಿಕರು ಸ್ವಚ್ಛಗೊಳಿಸಿ ಪಟ್ಟಣದ ಹೊರವಲಯ ಟೆಂಗುಂಟಿ ರಸ್ತೆಯಲ್ಲಿನ ಘನ ತ್ಯಾಜ್ಯ ಘಟಕಕ್ಕೆ ಸಾಗಿಸಿ, ಪ್ರತ್ಯೆಕವಾಗಿ ಆಳವಾದ ಗುಂಡಿ ತೆಗೆದು ಹೂಳಲಾಯಿತು ಎಂದು ತಿಳಿಸಿದರು.