ಗಂಗಾವತಿ (ಕೊಪ್ಪಳ) :ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹುದ್ದೆ ಸಂಬಂಧ ಏರ್ಪಟ್ಟ ವಿವಾದವನ್ನು ಒಂದು ವಾರದ ಬಳಿಕ ಕೊನೆಗೂ ಇತ್ಯರ್ಥಗೊಳಿಸುವಲ್ಲಿ ಶಾಸಕ ಜಿ. ಜನಾರ್ದನ ರೆಡ್ಡಿ ಯಶಸ್ವಿಯಾಗಿದ್ದಾರೆ. ಬುಧವಾರ ಕಾಲೇಜಿಗೆ ಭೇಟಿ ನೀಡಿದ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ರೆಡ್ಡಿ, ಕಾಲೇಜಿನ ವಿಚಾರಗಳು ಪದೇ ಪದೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ, ಇದು ಕಾಲೇಜಿಗೆ ಕೆಟ್ಟ ಹೆಸರು ತರಲು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹುದ್ದೆಯನ್ನು ಯಾರಿಗೂ ಹಸ್ತಾಂತರ ಮಾಡದಂತೆ ನಾನು ಒಂದು ವಾರದ ಹಿಂದೆ ಸೂಚನೆ ನೀಡಿದ ಬಳಿಕವೂ ನೀವು ಉದ್ದೇಶಪೂರ್ವಕವಾಗಿ ನಿಯಮಗಳನ್ನು ಮೀರಿ ಬೇರೊಬ್ಬರಿಗೆ ಕೊಟ್ಟಿದ್ದೀರಿ. ಇದು ಸರಿಯಲ್ಲ ಎಂದು ನಿರ್ಗಮಿತ ಪ್ರಾಂಶುಪಾಲೆ ಜಗದೇವಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಇಲಾಖೆಯ ಮೇಲಾಧಿಕಾರಿಗಳಿಗೆ ಸೂಚನೆ ನೀಡದೆ ಮತ್ತು ನನ್ನ ಆದೇಶವನ್ನೂ ಪಾಲಿಸದೇ ನೀವು ಪ್ರಭಾರ ಪ್ರಾಂಶುಪಾಲ ಹುದ್ದೆಯನ್ನು ಬೇರೆಯವರಿಗೆ ಬಿಟ್ಟಿಕೊಟ್ಟಿದ್ದು ಸರಿಯಲ್ಲ. ಕೂಡಲೇ ಮತ್ತೆ ಪ್ರಾಂಶುಪಾಲ ಹುದ್ದೆಯನ್ನು ವಹಿಸಿಕೊಳ್ಳಬೇಕು. ಇನ್ನೊಂದು ವಾರದಲ್ಲಿ ಈ ಬಗ್ಗೆ ಸೂಕ್ತ ನಿಲುವು ತಳೆಯಲಿದ್ದು, ಹೊಸ ಪ್ರಾಂಶುಪಾಲರನ್ನು ಕರೆತರುವುದು ಇಲ್ಲವೇ ನಿಯಮಗಳ ಪ್ರಕಾರ, ಯಾರಿಗೆ ನೀಡಬೇಕು ಎಂದು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳೋಣ. ಅಲ್ಲಿಯವರೆಗೂ ನೀವೇ ಪ್ರಾಂಶುಪಾಲ ಹುದ್ದೆಯಲ್ಲಿ ಮುಂದುವರೆಯುವಂತೆ ಶಾಸಕ ಜಗದೇವಿ ಕಳಶೆಟ್ಟಿ ಎಂಬವರಿಗೆ ಸೂಚನೆ ನೀಡಿದರು.
ಮುಂದಿನ ವಾರದಲ್ಲಿ ಮತ್ತೆ ಕಾಲೇಜಿನಲ್ಲಿ ಸಭೆ ನಡೆಸಿ, ಅಗತ್ಯ ಅಭಿವೃದ್ಧಿ ವಿಚಾರ ಮಾತನಾಡೋಣ ಎಂದು ರೆಡ್ಡಿ ಹೇಳಿದರು. ಕೇವಲ ಎಂಟು ದಿನದ (ಆ. 8) ಹಿಂದಷ್ಟೇ ಪ್ರಭಾರ ಪ್ರಾಂಶುಪಾಲ ಹುದ್ದೆ ವಹಿಸಿಕೊಂಡಿದ್ದ ಹಿರಿಯ ಉಪನ್ಯಾಸಕ ಜಾಜಿ ದೇವೇಂದ್ರಪ್ಪ ಶಾಸಕರ ಸೂಚನೆಯ ಮೇರೆಗೆ ಅಧಿಕಾರ ಹಸ್ತಾಂತರ ಮಾಡಿದ್ದರು.