ಕೊಪ್ಪಳ:ಹಣ್ಣುಗಳ ರಾಜ ಮಾವು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ. ನೈಸರ್ಗಿಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣುಗಳಿಗೆ ತುಸು ಬೇಡಿಕೆ ಜಾಸ್ತಿ. ಹೀಗಾಗಿ, ಮಾವು ಬೆಳೆದ ರೈತರು ನೈಸರ್ಗಿಕವಾಗಿ ಹಣ್ಣಾಗಿಸಿ ನೇರವಾಗಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು. ಇದಕ್ಕೆ ಬೇಕಾದ ಮಾರುಕಟ್ಟೆ ಅನುಕೂಲ ಕಲ್ಪಿಸಿಕೊಡಲು ಕೊಪ್ಪಳ ತೋಟಗಾರಿಕೆ ಇಲಾಖೆ ಮುಂದಾಗಿದೆ.
ಈಗಾಗಲೇ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಜಿಲ್ಲೆಯಲ್ಲಿ ಕೇಸರ್, ದಶಹರಿ, ಬೆನಿಶನ್ ಸೇರಿದಂತೆ ವಿವಿಧ ತಳಿಯ ಮಾವು ಬೆಳೆಯಲಾಗಿದೆ. ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಮಾವಿನ ಬೆಳೆಯಿಂದ ಸುಮಾರು 20 ರಿಂದ 30 ಸಾವಿರ ಟನ್ ಇಳುವರಿ ಬರಲಿದೆ. ಈ ಪೈಕಿ ಈಗಾಗಲೇ ಸುಮಾರು 1,500 ಟನ್‌ನಷ್ಟು ಮಾವು ಬಂದಿದೆ. ಅದರಲ್ಲೂ ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳಿಗೆ ತುಸು ಬೇಡಿಕೆ ಹೆಚ್ಚು ಇರುತ್ತದೆ. ಹೀಗಾಗಿ, ಕೆಲ ರೈತರು ತಾವು ಬೆಳೆದಿರುವ ಮಾವಿನ ಕಾಯಿಗಳನ್ನು ನೈಸರ್ಗಿಕವಾಗಿ ಹಣ್ಣು ಮಾಡಿ, ನೇರವಾಗಿ ಮಾರಾಟ ಮಾಡಲು ತಯಾರಿ ನಡೆಸಿದ್ದಾರೆ.