ಕೊಪ್ಪಳ: ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಹಾಗೂ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಜಿಲ್ಲಾಡಳಿತ ಹಮ್ಮಿಕೊಂಡಿರುವ 'ಮನ್ವಂತರ' ಸ್ಪರ್ಧೆಗೆ 5,421 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಕೊಪ್ಪಳದಲ್ಲಿ ಪುಸ್ತಕ 'ಮನ್ವಂತರ' ಸ್ಪರ್ಧೆ
ಕೊಪ್ಪಳದಲ್ಲಿ ಮನ್ವಂತರ ಸ್ಪರ್ಧೆಗೆ ವಿದ್ಯಾರ್ಥಿಗಳ ಹಾಗೂ ವಯಸ್ಕರ ವಿಭಾಗದ ಸ್ಪರ್ಧೆಯನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಸಂದರ್ಶನ ಹಂತದಲ್ಲಿ ಅಂತಿಮವಾಗಿ ಆಯ್ಕೆಯಾಗುವ ವಿಮರ್ಶೆಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ನಗದು ಬಹುಮಾನವನ್ನು ಜಿಲ್ಲಾಡಳಿತ ನೀಡಲಿದೆ.
ವಿದ್ಯಾರ್ಥಿಗಳ ಹಾಗೂ ವಯಸ್ಕರ ವಿಭಾಗದಲ್ಲಿ ಒಟ್ಟು ಎರಡು ಸ್ಪರ್ಧೆಗಳನ್ನು ಒಳಗೊಂಡಿರುವ ಈ ಪುಸ್ತಕ ಓದಿ ವಿಮರ್ಶೆ ಬರೆಯುವ ಮನ್ವಂತರ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರತಿದೆ. ವಿದ್ಯಾರ್ಥಿಗಳ ವಿಭಾಗದಲ್ಲಿ ಡಾ. ಕೆ. ಶಿವರಾಮ ಕಾರಂತರ 'ಚೋಮನದುಡಿ' ಓದಿ ವಿಮರ್ಶೆ ಬರೆಯಲು 2,069 ವಿದ್ಯಾರ್ಥಿಗಳು, ಸುಧಾ ಮೂರ್ತಿ ಅವರ 'ಮಹಾಶ್ವೇತ'ಕ್ಕೆ 701, ಆರ್.ಕೆ. ನಾರಾಯಣ ಅವರ 'ಸ್ವಾಮಿ ಮತ್ತು ಸ್ನೇಹಿತರು' - 1,249, ಅಮಿಶ್ ತ್ರಿಪಾಠಿ ಅವರ 'ಮೆಲುಹ' - 120 ಹಾಗೂ ಅರವಿಂದ ಅಡಿಗ ಅವರ 'ದಿ ವೈಟ್ ಟೈಗರ್' ಕೃತಿ ಓದಿ ವಿಮರ್ಶೆ ಬರೆಯಲು 279 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇನ್ನು ವಯಸ್ಕರ ವಿಭಾಗದಲ್ಲಿ ಡಾ. ಕೆ. ಶಿವರಾಮ ಕಾರಂತರ 'ಬೆಟ್ಟದ ಜೀವ' ಕೃತಿ ಓದಿ ವಿಮರ್ಶೆ ಬರೆಯಲು 538, ಎಸ್.ಎಲ್. ಭೈರಪ್ಪ ಅವರ 'ವಂಶವೃಕ್ಷ' - 320, ಗಿರೀಶ್ ಕಾರ್ನಾಡರ 'ಆಡಾಡತ ಆಯುಷ್ಯ' - 65, ಟ್ರೆವರ್ ನೋಹ ಅವರ ಬಾರ್ನ್ ಕ್ರೈಂ - 47 ಹಾಗೂ ಪೀಲ್ ನೈಟ್ ಅವರ 'ಶೂ ಡಾಗ್' ಕೃತಿ ಓದಿ ವಿಮರ್ಶೆ ಬರೆಯಲು 33 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಆಗಸ್ಟ್ 10 ಕೊನೆಯ ದಿನವಾಗಿ ನಿಗದಿಪಡಿಸಿತ್ತು.