ಗಂಗಾವತಿ (ಕೊಪ್ಪಳ):''ನಗರದ ಮುಖ್ಯರಸ್ತೆಗಳು ಮೊದಲು 80 ಅಡಿಗಳಷ್ಟು ಅಗಲ ಇದ್ದವು. ಆದರೆ, ಈಗ 30ರಿಂದ 40 ಅಡಿಗಳಷ್ಟು ರಸ್ತೆಗಳನ್ನು ಒತ್ತುವರಿ ಮಾಡಲಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ತೆರವು ಕಾರ್ಯಾಚರಣೆ ನಡೆಸಲಾಗುವುದು'' ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ಸಿಬಿಎಸ್ ವೃತ್ತದ ಮಾರ್ಗವಾಗಿ ರೈಲ್ವೆ ಗೇಟ್ ಬಳಿಯಿರುವ ಸ್ವಾಗತ ಕಮಾನಿನವರೆಗೂ ಕೆಆರ್ಡಿಸಿಎಲ್ನಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
''ರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ಇಂದಿರಾ ಗಾಂಧಿ ವೃತ್ತದ ಮೂಲಕ ಗಾಂಧಿ ವೃತ್ತದವರೆಗೆ ಮತ್ತು ಕನಕದಾಸ ವೃತ್ತದಿಂದ ನೀಲಕಂಠೇಶ್ವರ ವೃತ್ತದ ರಸ್ತೆ 80 ಅಡಿಗಳಷ್ಟು ಅಗಲವಿರುವ ಕುರಿತು ಕಮಿಷನರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತೆರವು ಕಾರ್ಯಾಚರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದರು.
''ರಾಣಾ ಪ್ರತಾಪ್ ಸಿಂಗ್ ವೃತ್ತ ದೊಡ್ಡದಾಗಿದ್ದು, ಇದರಿಂದ ವಾಹನ ಸವಾರರಿಗೆ ಭಾರಿ ಸಮಸ್ಯೆಯಾಗಿದೆ. ಹೀಗಾಗಿ ವೃತ್ತದಲ್ಲಿರುವ ರಾಣಾ ಪ್ರತಾಪ್ ಸಿಂಗ್ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಗಾತ್ರ ತಗ್ಗಿಸಲಾಗುವುದು. ವೃತ್ತವನ್ನು ರಸ್ತೆಯ ಪಕ್ಕಕ್ಕೆ ಸರಿಸಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸಲಹೆಗಳು ಬಂದಿವೆ. ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕಿರುವ ವೃತ್ತ ಮುಂದುವರೆಯುಂತೆ ಮಾಡಿ, ಕೇವಲ ಗಾತ್ರ ತಗ್ಗಿಸುವ ಚಿಂತನೆ ಇದೆ'' ಎಂದು ಅವರು ತಿಳಿಸಿದರು.