ಕರ್ನಾಟಕ

karnataka

ETV Bharat / state

ಕೋವಿಡ್​ ಕಾವಿಗೆ ಬೆಂಡಾಗಿದ್ದ ಕಮ್ಮಾರಿಕೆ: ಮರಳಿ ಸಹಜ ಸ್ಥಿತಿಯತ್ತ

ಕೊರೊನಾ ಹಾವಳಿ ಕಾಳ್ಗಿಚ್ಚಿನಂತೆ ಹಬ್ಬಿ ಸಾಮಾನ್ಯ ಜನರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮೂರು ತಿಂಗಳಿನಿಂದ ಕೆಲಸವಿಲ್ಲದೇ ಖಾಲಿ ಇದ್ದ ಕುಲುಮೆಗಾರರಿಗೆ, ಸದ್ಯ ಕೊಂಚ ಮಟ್ಟಿಗೆ ವರುಣನ ದಯೆಯಿಂದ ಕೆಲಸ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ನೊಂದ ಜೀವಕ್ಕೆ ಆಧಾರ ಸಿಕ್ಕಿದಂತಾಗುತ್ತದೆ.

kustagi-Blacksmithing-problems
ಕಮ್ಮಾರಿಕೆ

By

Published : May 30, 2020, 5:30 PM IST

ಕುಷ್ಟಗಿ(ಕೊಪ್ಪಳ): ಲಾಕ್​​​ಡೌನ್​​​​​​​ನಿಂದಾಗಿ ಸ್ಥಗಿತಗೊಂಡಿದ್ದ ಕುಲ ಕಸುಬು, ಕುಲುಮೆಗಾರಿಕೆಯ ಕಾರ್ಯಚಟುವಟಿಕೆಗಳು ಮತ್ತೆ ಪ್ರಾರಂಭವಾಗಿವೆ. ತಕ್ಕ ಮಟ್ಟಿಗೆ ಮಳೆಯಾದ ಹಿನ್ನೆಲೆ, ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಕೃಷಿ ಉಪಕರಣಗಳ ತಯಾರಿಕೆಯಲ್ಲಿ ನಿರತವಾಗಿರುವ ಕೈಗಳು, ಹಿಂದಿನ ಎರಡು ತಿಂಗಳ ಸಂಕಷ್ಟ ಮರೆಯುತ್ತಿವೆ.

ಪ್ರಖರ ಬಿಸಿಲಿನ ತಾಪವನ್ನು ಲೆಕ್ಕಿಸದೇ ನಿಗಿನಿಗಿ ಕೆಂಡದ ಕುಲುಮೆಯ ಬಿಸಿಯಲ್ಲಿ ಮೂರ್ನಾಲ್ಕು ಜನ ಸುತ್ತಿಗೆಯಿಂದ ಬಡಿದಾಗಲೇ ಕಠಿಣ ಕಬ್ಬಿಣ ಹದಕ್ಕೆ ಬರುತ್ತದೆ. ಆದರೆ, ಇವರು ಇಷ್ಟೆಲ್ಲ ಶ್ರಮಿಸಿದರೂ ಅಷ್ಟಕಷ್ಟೆ ಆಗಿದೆ. ಕಷ್ಟದಲ್ಲಿದ್ದರೂ ಯಾರೂ ಕೈಚಾಚಿಲ್ಲ, ಕೆಲಸ ತೆಗೆದುಕೊಳ್ಳುವ ಸಂದರ್ಭದಲ್ಲಿ ಯಾರೂ ಗುರುತಿಸಿಲ್ಲ, ಸ್ಥಳದ ಬಾಡಿಗೆ ಮುಂದೂಡಲಿಲ್ಲ ಎನ್ನುವ ಕೊರಗು ಇನ್ನೂ ಇದೆ.

ಕೋವಿಡ್​ ಕಾವಿಗೆ ಬೆಂಡಾಗಿದ್ದ ಕಮ್ಮಾರಿಕೆ

ಕೊರೊನಾ​ ಪೆಟ್ಟನ್ನು ಇನ್ನೂ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಕ್​ಡೌನ್​ ವೇಳೆ ಯಾರೂ ನಮ್ಮನ್ನು ಕಣ್ಣೆತ್ತಿಯೂ ನೋಡಲಿಲ್ಲ. ಯಾರ್ಯಾರಿಗೋ ಆಹಾರದ ಕಿಟ್ ಕೊಟ್ಟಿದ್ದಾರೆ. ನಮಗೆ ಮಾತ್ರ ಹಾಲಿನ ಪ್ಯಾಕೆಟ್​ ಸಹ ನೀಡಿಲ್ಲ. ಬೀದರ ಜಿಲ್ಲೆಯ ಬಾಲ್ಕಿಯಿಂದ ಬಂದು ಹತ್ತಾರು ವರ್ಷಗಳಿಂದ ಇಲ್ಲಿಯೇ ಇದ್ದೇವೆ. ಜೀವನೋಪಾಯಕ್ಕೆ ಇಲ್ಲಿ ನೆಲೆ ಸಿಕ್ಕಿದೆ. ಲಾಕ್​​ಡೌನ್ ಸಂದರ್ಭದಲ್ಲೂ ಬಾಲ್ಕಿಗೆ ಹೋಗಿಲ್ಲ.

ದಿನ 13 ಜನ ಕೆಲಸ ನಿರ್ವಹಿಸಿದರೂ, ದಿನದ ಆದಾಯ 1,500 ದಿಂದ 2 ಸಾವಿರ ರೂ. ಸ್ಥಳದ ಬಾಡಿಗೆ 4,500 ರೂ. ವಿದ್ಯುತ್ ಬಿಲ್ 1,200 ಬರುತ್ತಿದೆ. ಇದೆಲ್ಲ ಖರ್ಚು ವೆಚ್ಚದ ನಡುವೆ ಬರುವ ಆದಾಯದಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿದೆ. ಇನ್ನಾದರೂ ಉತ್ತಮ ಮಳೆಯಾದ್ರೆ ಕೈತುಂಬ ಕೆಲಸ ಸಿಗುತ್ತದೆ. ಮಳೆ ಬಾರದಿದ್ದರೆ ಬದುಕು ಕಟ್ಟಿಕೊಳ್ಳುವುದು ಕಷ್ಟ ಎನ್ನುತ್ತಾರೆ ಕುಲುಮೆಗಾರ ಸುಭಾಶ್ ಸೋಳಂಕಿ.

ಒಟ್ಟಿನಲ್ಲಿ ಲಾಕ್​ಡೌನ್​ ಬಡ ಕಾರ್ಮಿಕರರ ಬದುಕಿನ ಜೊತೆ ಆಟವಾಡಿದ್ದಂತೂ ಸತ್ಯ. ಇನ್ನಾದರೂ ವರುಣ ದೇವ ಕೃಪೆ ತೋರಿ ಉತ್ತಮ ಮಳೆ ಸುರಿಸಿದರೆ ಎಲ್ಲರ ಬಾಳು ಹಸನಾಗುವುದಂತೂ ನಿಜ.

ABOUT THE AUTHOR

...view details